ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ನನಗೆ ಆತ್ಮೀಯ ಸ್ನೇಹಿತರಾಗಿದ್ದ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರಿಗೆ ಸುದೀರ್ಘಕಾಲ ರಾಜಕೀಯ ಕಾರ್ಯದರ್ಶಿಯಾಗಿ ಪಕ್ಷವನ್ನು ಸೋಲು-ಗೆಲುವುಗಳ ಕಾಲದಲ್ಲಿ ನಿರ್ವಾಜ್ಯ ನಿಷ್ಠೆಯಿಂದ ಮುನ್ನಡೆಸಿದ್ದರು. ಅಹ್ಮದ್ ಪಟೇಲ್ ತಮ್ಮ ಇಡೀ ಬದುಕನ್ನೇ ಪಕ್ಷಕ್ಕೆ ಮುಡಿಪಾಗಿಟ್ಟವರು.
ಪ್ರಚಾರದ ಬೆಳಕಿನಲ್ಲಿ ಹೆಚ್ಚು ಕಾಣಿಸಿಕೊಳ್ಳದೇ, ರಾಜಕೀಯ ಅಧಿಕಾರಕ್ಕಾಗಿ ಹೆಚ್ಚು ಆಸೆ ಪಡದೆ, ಪಕ್ಷವನ್ನೇ ತನ್ನ ಕುಟುಂಬ ಎಂದು ತಿಳಿದುಕೊಂಡು ದುಡಿಯುತ್ತಿದ್ದ ಪಟೇಲ್ ಅವರ ರಾಜಕೀಯ ಬದುಕು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆಲ್ಲ ಮಾದರಿಯಾಗಿದೆ ಎಂದಿದ್ದಾರೆ.
ಸೋನಿಯಾ ಗಾಂಧಿಯವರು ಮೊದಲ ಬಾರಿ ಪಕ್ಷದ ಅಧ್ಯಕ್ಷರಾದ ದಿನದಿಂದ ತನ್ನ ಕೊನೆಯ ದಿನದವರೆಗೆ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅವರೆಲ್ಲ ದುಃಖ ದುಮ್ಮಾನಗಳನ್ನು ಹಂಚಿಕೊಂಡು ಬೆಂಗಾವಲಿಗೆ ನಿಂತಿದ್ದವರು ಅಹ್ಮದ್ ಪಟೇಲ್. ಅಹ್ಮದ್ ಪಟೇಲ್ ಅವರ ನಿಧನದಿಂದ ವೈಯಕ್ತಿಕವಾಗಿ ನಾನು ನಂಬಿಕಸ್ತ ಗೆಳೆಯನನ್ನು, ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಹಿಡಿದು ಧೈರ್ಯ ತುಂಬುತ್ತಿದ್ದ ಹಿತೈಷಿಯನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನನ್ನ ರಾಜಕೀಯ ಬದುಕಿನ ಪ್ರಮುಖ ನಿರ್ಧಾರಕ್ಕೆ ಕಾರಣಕರ್ತರಾಗಿದ್ದ ಅಹ್ಮದ್ ಪಟೇಲ್ ಕೊನೆಯವರೆಗೆ ನನ್ನ ಹಿತ ಚಿಂತಕರಾಗಿದ್ದರು. ನನ್ನ ದುಃಖ, ಮಾತುಗಳನ್ನು ಮೀರಿದ್ದು. ಅಹ್ಮದ್ ಪಟೇಲ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ. ಕೊರೊನಾ ಸೋಂಕಿನ ನಿರ್ಬಂಧಗಳಿಂದಾಗಿ ಪಟೇಲ್ ಅವರ ಅಂತಿಮ ದರ್ಶನವನ್ನು ಮಾಡುವ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಅಹ್ಮದ್ ಪಟೇಲ್ ಅವರಿಗೆ ನನ್ನ ಶ್ರದ್ಧಾಂಜಲಿ ಎಂದರು.