ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಸಂಜೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು.
ಉಭಯ ನಾಯಕರು ಈ ಭೇಟಿಯ ವೇಳೆ ವಿಧಾನ ಪರಿಷತ್ ಚುನಾವಣೆ ಮತ್ತಿತರ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು. ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ ಐವರು ಹಾಗೂ ನಾಮನಿರ್ದೇಶಿತ ಐವರು ಸದಸ್ಯರ ಅಧಿಕಾರವಧಿ ಇದೇ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ.
ಜೂನ್ 29ರಂದು ನಡೆಯುವ ಚುನಾವಣೆಯಲ್ಲಿ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕಳಿಸುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಇದೆ. ನಿವೃತ್ತಿ ಆಗುತ್ತಿರುವ ಸದಸ್ಯರನ್ನೇ ಅವರು ಆಯ್ಕೆ ಮಾಡುವುದು ಅಥವಾ ಬೇರೊಬ್ಬರಿಗೆ ಅವಕಾಶ ಕಲ್ಪಿಸುವುದೋ ಎಂಬ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದರು.
40ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಇಬ್ಬರನ್ನು ಆಯ್ಕೆ ಮಾಡಬೇಕಿದೆ. ಪಕ್ಷದಲ್ಲಿ ಭಿನ್ನಮತ ಉಂಟಾಗದಂತೆ ನೋಡಿಕೊಳ್ಳುವ ರೀತಿ ಆಯ್ಕೆ ಮಾಡಿಕೊಳ್ಳಬೇಕಿದೆ. ಈ ವಿಚಾರವಾಗಿ ಇಬ್ಬರು ನಾಯಕರು ಇಂದು ಸಭೆ ಸೇರಿ ಚರ್ಚಿಸಿದ್ದಾರೆ.
ಆದಷ್ಟು ಬೇಗ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್ಗಡ್ಗೆ ಕಳಿಸಿ ಕೊಡುವ ಅನಿವಾರ್ಯತೆ ಇರುವ ಹಿನ್ನೆಲೆ ನಾಯಕರು ಸಭೆ ಸೇರಿ ಚರ್ಚಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಸಿದ್ಧರಾಮಯ್ಯ ಹಲವು ಆಕಾಂಕ್ಷಿಗಳ ಅಹವಾಲು ಸ್ವೀಕರಿಸಿದ್ದಾರೆ. ಇದೀಗ ಅಂತಿಮ ತೀರ್ಮಾನ ಕೈಗೊಳ್ಳುವ ಸಂದರ್ಭ ಬಂದಿರುವ ಹಿನ್ನೆಲೆ ಡಿಕೆಶಿ ಜೊತೆಗೂ ಸಮಾಲೋಚಿಸಿದರು.