ಬೆಂಗಳೂರು: ದಾವಣಗೆರೆಯಲ್ಲಿ ಭರ್ಜರಿ ಅಮೃತ ಮಹೋತ್ಸವ ಆಚರಿಸಿಕೊಂಡು ವಾಪಸ್ ಆಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ವಿಶ್ರಾಂತಿಯಲ್ಲಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಅಮೃತ ಮಹೋತ್ಸವ ಸಮಾರಂಭ ಸಂಬಂಧದ ಸಿದ್ಧತೆ ಹಾಗೂ ಪ್ರಗತಿಯ ವಿಚಾರವಾಗಿ ಅವರು ವಿವಿಧ ನಾಯಕರ ಜೊತೆ ನಿರಂತರ ಸಮಾಲೋಚನೆಯಲ್ಲಿದ್ದರು.
ಪಕ್ಷದ ಪ್ರಮುಖ ನಾಯಕರಾಗಿ ಹಾಗೂ ಸದ್ಯದ ಸ್ಥಿತಿಯಲ್ಲಿ ಪಕ್ಷದ ಪ್ರಮುಖ ಆಧಾರಸ್ತಂಭ ತಾವೇ ಎಂಬುದನ್ನು ಈ ಸಮಾರಂಭದ ಮೂಲಕ ಸಿದ್ದರಾಮಯ್ಯ ತೋರಿಸಿಕೊಂಡಿದ್ದಾರೆ. ಈ ಮೂಲಕ ಪಕ್ಷದಲ್ಲಿರುವ ತಮ್ಮ ಪ್ರತಿಸ್ಪರ್ಧಿಗಳಿಗೆ ಸೂಕ್ತ ಉತ್ತರವನ್ನೂ ನೀಡಿದ್ದಾರೆ. ನಾಯಕತ್ವ ವಹಿಸಿಕೊಳ್ಳಲು ಸಾಕಷ್ಟು ನಾಯಕರು ಕಾಂಗ್ರೆಸ್ನಲ್ಲಿ ಪ್ರಯತ್ನ ನಡೆಸುತ್ತಿದ್ದು, ಈ ಕಾರ್ಯಕ್ರಮದ ಯಶಸ್ಸಿನ ಮೂಲಕ ಸಿದ್ದರಾಮಯ್ಯ ಉಳಿದವರನ್ನೆಲ್ಲ ಹಿಂದಿಕ್ಕಿ ಅತ್ಯಂತ ಮುನ್ನೆಲೆಗೆ ಬಂದು ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ: ಕಳೆದ ವಾರ ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಕೊಂಚ ಚೇತರಿಸಿಕೊಂಡು ನಿನ್ನೆಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಒಂದು ದಿನ ಮುಂಚಿತವಾಗಿಯೇ ದಾವಣಗೆರೆಗೆ ತೆರಳಿದ್ದ ಅವರು ತಡರಾತ್ರಿವರೆಗೂ ಸಮಾರಂಭದ ಸಿದ್ಧತೆ ಕುರಿತು ಅಭಿಮಾನಿಗಳು ಮತ್ತು ಮುಖಂಡರ ಜೊತೆ ಸಮಾಲೋಚಿಸಿದ್ದರು. ನಾಲ್ಕೈದು ಗಂಟೆಗಳ ಕಾಲ ನಿರಂತರವಾಗಿ ನಡೆದ ಸಮಾರಂಭದಲ್ಲಿ ಬಹಳ ಚಟುವಟಿಕೆಯಿಂದ ಓಡಾಡಿಕೊಂಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಕೈಸನ್ನೆ ಸೂಚನೆ.. ಸಿದ್ದರಾಮಯ್ಯರನ್ನು ಅಪ್ಪಿಕೊಂಡ ಡಿಕೆಶಿ: ವಿಡಿಯೋ ನೋಡಿ
ಸಮಾರಂಭ ಮುಗಿಸಿ ನಿನ್ನೆ ತಡರಾತ್ರಿ ಬೆಂಗಳೂರಿನ ಸರ್ಕಾರಿ ನಿವಾಸಕ್ಕೆ ಹಿಂತಿರುಗಿರುವ ಸಿದ್ದರಾಮಯ್ಯ, ಇಂದು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮದ ಯಶಸ್ಸನ್ನು ಹಂಚಿಕೊಳ್ಳುವ ಸಲುವಾಗಿ ಕೆಲ ನಾಯಕರು ನಿವಾಸಕ್ಕೆ ಆಗಮಿಸಿದರೂ, ಅವರನ್ನು ಭೇಟಿಯಾಗಿಲ್ಲ. ಅಲ್ಲದೆ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ಮತ್ತು ನಾಳೆ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ನಂತರ ಮೈಸೂರು ಇಲ್ಲವೇ ಬಾಗಲಕೋಟೆಯತ್ತ ತೆರಳಬಹುದು ಎಂಬ ಮಾಹಿತಿ ಇದೆ.
ವಿಶ್ರಾಂತಿಯಲ್ಲಿರುವ ಡಿಕೆಶಿ: ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ರಾಹುಲ್ ಗಾಂಧಿ ಜೊತೆ ಹುಬ್ಬಳ್ಳಿಗೆ ವಾಪಸ್ ಆಗಿದ್ದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾತ್ರಿ ಅಲ್ಲಿಯೇ ತಂಗಿದ್ದರು. ರಾಹುಲ್ ಗಾಂಧಿ ರಾತ್ರಿ ದೆಹಲಿಗೆ ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸಿದ್ದಾರೆ. ರಾಹುಲ್ ಆಗಮನದಿಂದ ತೆರಳುವವರೆಗೂ ಅವರ ಜೊತೆಯಲ್ಲೇ ಇದ್ದ ಡಿಕೆಶಿ ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಹೊರಟು ಬೆಂಗಳೂರಿಗೆ ವಾಪಸ್ ಆದರು.