ಬೆಂಗಳೂರು: ನೀರಿನ ಸದ್ಭಳಕೆ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ನಾವೆಲ್ಲಾ ಅನಾವಶ್ಯಕವಾಗಿ ಬೋರ್ವೆಲ್ ಕೊರೆಯಿಸಿ ನೀರು ಖಾಲಿ ಮಾಡುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಲಾಖೆಯ 'ಜಲಾಮೃತ ಕೈಪಿಡಿ 2020' ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಜಲಾಮೃತ. ನಾವು ನೀರನ್ನು ಪುನಶ್ಚೇತನ ಮಾಡಬೇಕಿದೆ. ಇದರ ಜೊತೆಗೆ ಹಸಿರೀಕರಣ ಮಾಡುತ್ತಿದ್ದೇವೆ. ನಿಜಲಿಂಗಪ್ಪ ಅವರು ಈ ಪುಸ್ತಕದ ಪ್ರಕಟಕರು, 6 ಸಾವಿರ ಗ್ರಾಮ ಪಂಚಾಯಿತಿಗೆ ಕಳುಹಿಸುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ಮಾಡಿಕೊಂಡಿದೆ. ಪಂಚಾಯಿತಿ ಚುನಾವಣೆಗೆ ಸರ್ಕಾರ ಸಂಪೂರ್ಣ ಸಿದ್ಧವಿದೆ. ಮೀಸಲಾತಿ ಕ್ಷೇತ್ರ ಕೂಡ ತಯಾರಿದೆ. ಚುನಾವಣಾ ಆಯೋಗ ಸೂಚನೆ ನೀಡಿದ ತಕ್ಷಣ ಚುನಾವಣೆ ಮಾಡಲು ನಾವು ತಯಾರಿದ್ದೇವೆ. ಜನ ಸಾಮಾನ್ಯರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಿಡಿಮಿಡಿ:
ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಮೇಲೆ ವ್ಯಾಮೋಹ ಹೋಗಿಲ್ಲ. ಈ ಜನ್ಮದಲ್ಲಿ ಮತ್ತೆ ಅವರು ಮುಖ್ಯಮಂತ್ರಿ ಆಗೋಲ್ಲ. ಬಿಜೆಪಿ-ಕೆಜಿಪಿಯಿಂದ ಸಿದ್ದರಾಮಯ್ಯ ಆಕಸ್ಮಿಕವಾಗಿ ಸಿಎಂ ಆದ್ರು. ಅದನ್ನು ಅವ್ರು ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಳುಗಿಸಿದ್ರು. ಸಿದ್ದರಾಮಯ್ಯ ಅವಧಿಯಲ್ಲೇ ಗುಂಪುಗಾರಿಕೆ ಹೆಚ್ಚಾಗಿದ್ದು. ಹಿಂದು- ಮುಸ್ಲಿಮರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ನಿಮ್ಮಿಂದಲೇ ಧರ್ಮಗಳ ಮಧ್ಯೆ ಗಲಭೆಗಳು ನಡೆಯುತ್ತಿವೆ. ನಮ್ಮ ನಾಯಕರು ಯಾರೂ ನನ್ನ ಬೆಂಬಲಕ್ಕೆ ಬಂದಿಲ್ಲ ಅಂತ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು ಎಂದರು.
ಇದು ಕೋಮುಗಲಭೆ ಅಲ್ಲ, ಮತಾಂಧರ ದೊಂಬಿ. ಘಟನೆಯನ್ನು ಕಾಂಗ್ರೆಸ್ ಖಂಡಿಸಿಲ್ಲ. ಸರ್ಕಾರ ಬಿದ್ದು ಹೋಗಲಿ ಅಂತ ಕಾಂಗ್ರೆಸ್ ಈ ಕುತಂತ್ರ ಮಾಡ್ತಿದೆ. ಈಗ ಅನೇಕ ಉಗ್ರಗಾಮಿಗಳು ಹೊರಗೆ ಬರ್ತಿದ್ದಾರೆ. ಇಂಥ ಉಗ್ರಗಾಮಿಗಳನ್ನ ನಮ್ಮ ಸರ್ಕಾರ ಮಟ್ಟ ಹಾಕುತ್ತೆ ಎಂದು ಈಶ್ವರಪ್ಪ ಹೇಳಿದ್ದಾರೆ.