ETV Bharat / state

ಮೃಧುಭಾಷಿ, ಹಾಸ್ಯಪ್ರಿಯ, ಕ್ರಾಂತಿ ಗೀತೆಯ ಹರಿಕಾರ ಸಿದ್ದಲಿಂಗಯ್ಯ ನಡೆದು ಬಂದ ಹಾದಿ ಇದು - ದಲಿತ ಕವಿ ಸಿದ್ದಲಿಂಗಯ್ಯ

ಒಬ್ಬ ದಲಿತ ಹೋರಾಟಗಾರರಾಗಿ, ಕ್ರಾಂತಿಕವಿಯಾಗಿ ಹಾಗೂ ಹಾಸ್ಯಭರಿತ ಮಾತುಗಳಿಂದ ವಿಧಾನ ಪರಿಷತ್​ ಅನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಮಾತುಗಾರರಾಗಿ ಜನ ಮಾನಸದಲ್ಲಿ ಪರಿಚಿತರಾಗಿದ್ದರು ಸಿದ್ದಲಿಂಗಯ್ಯ. ಇನ್ನು ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯ ಅವರ ಕಾವ್ಯ ಬಳಕೆಯಾಯಿತು. ಸಿದ್ದಲಿಂಗಯ್ಯ ಬರೆದ ಕ್ರಾಂತಿಗೀತೆ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ರಾಜ್ಯವ್ಯಾಪಿ ಜನಪ್ರಿಯವಾಗಿತ್ತು.

siddalingaiah
ಸಿದ್ದಲಿಂಗಯ್ಯ
author img

By

Published : Jun 11, 2021, 10:46 PM IST

ಬೆಂಗಳೂರು: ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರೊಳಗೊಬ್ಬ ಸಹೃದಯಿ ಚಾಲಾಕಿ ಹಾಸ್ಯಗಾರ ಇದ್ದ. ಜತೆಗೆ ಕ್ರಾಂತಿಗೀತೆಗಳನ್ನು ರಚಿಸುವ ಸಾಹಸಿಯೂ ನೆಲೆಸಿದ್ದ. ಒಟ್ಟಾರೆ ಸಿದ್ದಲಿಂಗಯ್ಯ ಅನ್ನುವ ಪದಕ್ಕೆ ಒಂದು ಅರ್ಥ, ವಿವರಣೆ, ಇಷ್ಟೇ ಅನ್ನುವ ಸೀಮಿತತೆ ಇರಲಿಲ್ಲ.

ಅವರ ಹರಿವು ಸಮುದ್ರದಷ್ಟು ವಿಶಾಲವಾಗಿತ್ತು. ಅವರ ಮಾತುಗಾರಿಕೆಯ ಪ್ರೌಢಿಮೆ ಆಕಾಶದ ಎತ್ತರಕ್ಕೆ ವ್ಯಾಪಿಸಿತ್ತು. ಒಬ್ಬ ಕವಿ, ಸಾಹಿತಿ, ಮೃಧು ಸ್ವಭಾವದ ರಾಜಕಾರಣಿ ಇದ್ದ. ಇವೆಲ್ಲವನ್ನೂ ಒಗ್ಗೂಡಿಸಿಕೊಂಡು ಅವರಿಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಒಬ್ಬ ದಲಿತ ಹೋರಾಟಗಾರರಾಗಿ, ಕ್ರಾಂತಿಕವಿಯಾಗಿ ಹಾಗೂ ಹಾಸ್ಯಭರಿತ ಮಾತುಗಳಿಂದ ವಿಧಾನ ಪರಿಷತ್​ನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಮಾತುಗಾರರಾಗಿ ಜನ ಮಾನಸದಲ್ಲಿ ಪರಿಚಿತರಾಗಿದ್ದರು ಸಿದ್ದಲಿಂಗಯ್ಯ. ಇವರು 1975 ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. 1979ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ನೀಡಿದರು.

“ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು, ವದೆಸಿಕೊಂಡು ವರಗಿದವರು ನನ್ನ ಜನಗಳು. ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು". “ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು. ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು.

ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ, ಛಡಿಯ ಏಟು ಹೊಡೆದವರ, ಕುತ್ತಿಗೆಗಳ ಹಿಡಿದರು. ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು, ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ, ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು..’ ಈ ರೀತಿ ಇವರ ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದರು.

ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯನವರ ಕಾವ್ಯ ಬಳಕೆಯಾಯಿತು. 'ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ' ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ಇಂದಿಗೂ ದಲಿತ ಚಳವಳಿ, ಹೋರಾಟ, ಪ್ರತಿಭಟನೆಯ ಆರಂಭದಲ್ಲಿ ಕ್ರಾಂತಿಗೀತೆಯಾಗಿ ಇದು ಮೊಳಗುತ್ತದೆ.

1975 ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯ ಅವರ ಕವಿತೆಗಳ ಎರಕದಲ್ಲಿ ರೂಪುಗೊಂಡರು. ಕುತೂಹಲದ ಸಂಗತಿಯೆಂದರೆ ಕವಿ ಸಿದ್ಧಲಿಂಗಯ್ಯನವರ ಮೊದಲ ಕವಿತೆಗಳಲ್ಲಿ ಅಂಬೇಡ್ಕರ್, ಮಾರ್ಕ್ಸವಾದ ಕಾಣುವ ಭಾವನೆಗಳ ಖಾಚಿತ್ಯವಿತ್ತು ಎಂದು ಹೇಳಲಾಗುತ್ತದೆ. ಇದು ಎರಡನೇ ಹಂತಗಳಲ್ಲಿ ಕಡಿಮೆ ಆಗುತ್ತಾ ಸಾಗಿತು ಎನ್ನುವವರು ಇದ್ದಾರೆ. ಆದರೆ ದಲಿತ ಕವಿಯಾಗಿ ಸಿದ್ದಲಿಂಗಯ್ಯ ಗಳಿಸಿದ ಹೆಸರು, ಮಾಡಿದ ಸಾಧನೆ ದೊಡ್ಡದು.

ಸಿದ್ದಲಿಂಗಯ್ಯ ಬರೆದ ಕ್ರಾಂತಿಗೀತೆ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ರಾಜ್ಯವ್ಯಾಪಿ ಜನಪ್ರಿಯವಾಗಿತ್ತು. ದಲಿತ ಸಂವೇದನೆಗಳನ್ನು ಸಶಕ್ತವಾಗಿ, ಆಕ್ರೋಶವನ್ನು ಅಕ್ಷರಗಳಾಗಿ ಸಾರಿ ಹೇಳಿದ ಗೀತೆಯಿದು.

ಕ್ರಾಂತಿಗೀತೆ, ನೊಂದವರ ಪಾಡುಗಳನ್ನೇ ಹಾಡಾಗಿಸುತ್ತಿದ್ದ ಈ ಕವಿಯು ಶೃಂಗಾರ ಗೀತೆಗಳನ್ನು ಬರೆಯಬಲ್ಲರು ಎಂದು ನಿರೂಪಿಸಿದ್ದು ಜನಪ್ರಿಯ ಗೀತೆ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’. ದಲಿತರು ಬರುವರು ದಾರಿಬಿಡಿ, ದಲಿತರ ಕೈಗೆ ರಾಜ್ಯಕೊಡಿ ಎಂಬ ಅವರ ಕ್ರಾಂತಿಗೀತೆ ಈಗಲೂ ದಲಿತ ಚಳವಳಿಗಳಲ್ಲಿ ಕೇಳಿಬರುವಂತಹದ್ದು. ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಮೆರವಣಿಗೆ, ಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರ ಕವಿತೆಗಳು ಅವರ ಪ್ರಮುಖ ಕವಿತಾ ಸಂಕಲನಗಳು.

ರಾಜಕೀಯ ಬದುಕು..
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸ್ನೇಹದಿಂದ ವಿಧಾನ ಪರಿಷತ್ತನ್ನು ಸಹ ಸಿದ್ಧಲಿಂಗಯ್ಯ ಪ್ರವೇಶಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಹ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು. ಅನೇಕ ಪ್ರಚಲಿತ ವಿದ್ಯಮಾನಗಳಿಗೆ ಮೌನಿಯಾದರು.

ಪಂಪ ಪ್ರಶಸ್ತಿ ಸಹ ಪಡೆದರು. ಸಾಹಿತ್ಯ ಕ್ಷೇತ್ರದಲ್ಲೂ ಉತ್ತಮ ಹೆಸರು ಮಾಡಿದ ಅವರು, ಗ್ರಾಮದೇವತೆಗಳು (ಸಂಶೋಧನ ಪ್ರಬಂಧ), ಊರುಕೇರಿ (ಆತ್ಮಕಥೆ) ಜನಸಂಸ್ಕೃತಿ, ಉರಿಕಂಡಾಯ, ಹಕ್ಕಿನೋಟ, ಪಂಚಮ ಮತ್ತು ನೆಲಸಮ, ಏಕಲವ್ಯ (ನಾಟಕ), ಸಾವಿರಾರು ನದಿಗಳು (1979) ಕಪ್ಪು ಜನರ ಹಾಡು (1982), ಹೊಲೆಮಾದಿಗರ ಹಾಡು (1975) ಇತ್ಯಾದಿಯನ್ನು ರಚಿಸಿ ಸೈ ಎನಿಸಿಕೊಂಡರು.

ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1 ಮತ್ತು ಭಾಗ 2:

ಅವರು ವಿಧಾನ ಪರಿಷತ್ ಸದಸ್ಯರಾಗಿ ಕರ್ತವ್ಯನಿರ್ವಹಿಸಿದ ಅನುಭವಗಳ ನೈಜ ಅನುಭವ ಕಥನ ರೂಪದಲ್ಲಿ ನೀಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡು ಬಾರಿ ನಾಮಕರಣಗೊಂಡಿರುವುದರ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ 2006-08 ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸಿದ್ಧಲಿಂಗಯ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಹಾಸ್ಯಪ್ರಿಯ...
ಮೃಧು ಭಾಷಿಯಾಗಿದ್ದ ಸಿದ್ದಲಿಂಗಯ್ಯ, ಹಾಸ್ಯಪ್ರಿಯರಾಗಿದ್ದರು. ನಗಿಸುತ್ತಲೇ ಜನರ ಅಗತ್ಯದ ಕೆಲಸವನ್ನು ಸರ್ಕಾರದಿಂದ ಮಾಡಿಸಿಕೊಳ್ಳುತ್ತಿದ್ದರು. ಇದಕ್ಕೊಂದು ಉದಾಹರಣೆ, ಒಮ್ಮೆ ವಿಧಾನ ಪರಿಷತ್​ನಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಗೋಪುರ ಕಾಮಗಾರಿ ತಡವಾದ ಬಗ್ಗೆ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಮುಜರಾಯಿ ಸಚಿವರು ತಡಬಡಾಯಿಸುತ್ತ "ಗೋಪುರ ಕಾಮಗಾರಿಯನ್ನು ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಕೊಡಲಾಗಿದೆ ಎಂದರು". ತಕ್ಷಣ ಸದನದಲ್ಲಿ ಕೋಲಾಹಲ ಶುರುವಾಯಿತು.

ಸಿವಿಲ್ ಕಾಮಗಾರಿಯನ್ನು ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಕೊಟ್ಟಿರುವುದರಿಂದ ಹೀಗಾಗಿದೆ. ಮಂತ್ರಿ ತಕ್ಷಣ ರಾಜಿನಾಮೆ ಕೊಡಬೇಕು ಎಂದು ಹಿರಿಯ ಸದಸ್ಯ ಎಂ ಸಿ ನಾಣಯ್ಯ ಮತ್ತು ಹಲವರು ಒತ್ತಾಯಿಸಿದರು.

ಕೋಲಾಹಲವನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದ ಸಿದ್ದಲಿಂಗಯ್ಯನವರು ಎದ್ದು ನಿಂತು ಸಭಾಪತಿ ಪೀಠದಲ್ಲಿದ್ದ ಡೇವಿಡ್ ಸೀಮಿಯೊನ್ ಅವರನ್ನು ಉದ್ದೇಶಿಸಿ "ಮಾನ್ಯ ಸಭಾಪತಿಗಳೇ, ಸಚಿವರು ಹೇಳಿ ಕೇಳಿ ದೇವರ ಇಲಾಖೆ ಮಂತ್ರಿಗಳು. ದೇವರಿಗೆ ಪ್ರಿಯವಾಗಲಿ ಎಂದು ಇವತ್ತು ಬೆಳಿಗ್ಗೆ ಸ್ವಲ್ಪ ಜಾಸ್ತಿ ತೀರ್ಥ ಸೇವನೆ ಮಾಡಿದ್ದಾರೆ. ಆದ್ದರಿಂದ ತಪ್ಪು ಉತ್ತರ ನೀಡಿದ್ದಾರೆ. ತಾವು ಮಾಫಿ ಮಾಡಬೇಕು" ಎಂದಾಗ ಇಡೀ ಸದನ ನಗೆಗಡಲಲ್ಲಿ ತೇಲಾಡಿತ್ತು. ಇಂತಹ ನೂರಾರು ಹಾಸ್ಯ ಸನ್ನಿವೇಶಗಳಿಗೆ ಸಿದ್ದಲಿಂಗಯ್ಯ ಅವರಿದ್ದ ಸದನ ಸಾಕ್ಷಿಯಾಗಿತ್ತು.

ಸಾಮಾಜಿಕ ಕಳಕಳಿ
'ವಿಧಾನ ಪರಿಷತ್​ನಲ್ಲಿ ನಾನು ಹಲವು ಬಾರಿ ದುಡಿವ ಜನರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತಿರುವೆ. ರೈತರು, ಕೃಷಿ ಕಾರ್ಮಿಕರು, ಮಹಿಳೆಯರ ತೊಂದರೆಗಳ ಬಗ್ಗೆ ಬೆಳಕು ಚೆಲ್ಲಿದೆ. ಶಾಸನ ಸಭೆಗಳು ಶೋಷಿತ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಮಾಡಬೇಕು' ಎಂದು ಒಮ್ಮೆ ಸಿದ್ದಲಿಂಗಯ್ಯ ಹೇಳಿದ್ದರು.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಅಜಲು ಪದ್ಧತಿಯನ್ನು (ಮೇಲ್ವರ್ಗದವರಿಗೆ ಕಾಯಿಲೆ ಬಂದರೆ ಅವರ ಕೂದಲು, ಉಗುರುಗಳನ್ನು ಅನ್ನದಲ್ಲಿ ಕಲಿಸಿ ದಲಿತರಿಗೆ ಉಣ್ಣಿಸುವುದು) ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು. ಅಂದು ಸಚಿವರಾಗಿದ್ದ ಸಮಾಜವಾದಿ ಹಿನ್ನಲೆಯ ಕಾಗೋಡು ತಿಮ್ಮಪ್ಪ ಅವರು ಕೂಡಲೇ ಅದನ್ನು ರದ್ದುಗೊಳಿಸಿದರು.

'ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ಹಾಗೆ ಮದುವೆಯಾದವರನ್ನು ಕೊಲ್ಲಬಾರದು. ಅಂತರ್ಜಾತಿ ವಿವಾಹವಾದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 5 ರಷ್ಟು ಮೀಸಲಾತಿ ನೀಡಬೇಕು. ಸರ್ಕಾರ ಅದನ್ನು ಒಪ್ಪಿಕೊಂಡಿತ್ತು. ಆದರೆ, ಕಾರ್ಯರೂಪಕ್ಕೆ ಬರಲಿಲ್ಲ' ಎಂಬ ವಿಶಾದ ಅವರಿಗೆ ಕೊನೆಯವರೆಗೂ ಕಾಡಿತು. ಒಂದು ರೀತಿ ಹಾಸ್ಯ ಚಟಾಕಿ ಹಾರಿಸುತ್ತಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಬಂದಿದ್ದ ಸಿದ್ದಲಿಂಗಯ್ಯ ಇನ್ನು ಈ ಕೆಲಸ ಮಾಡಲ್ಲ ಅನ್ನುವುದೇ ವಿಷಾದದ ಸಂಗತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.