ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆ ಸಿಎಂ ನಿವಾಸಕ್ಕೆ ಶ್ರೀಮಂತ ಪಾಟೀಲ್ ಹಾಗೂ ಡಾ. ಕೆ. ಸುಧಾಕರ್ ಭೇಟಿ ನೀಡಿದ್ದು ಧನ್ಯವಾದ ಸಲ್ಲಿಸಿದ್ದಾರೆ.
ಸಿಎಂ ಭೇಟಿ ಬಳಿಕ ನೂತನ ಸಚಿವರಾಗಲಿರುವ ಶ್ರೀಮಂತ ಪಾಟೀಲ್ ಮಾತನಾಡಿ, ಸಿಎಂ ಯಡಿಯೂರಪ್ಪ ಸಾಹೇಬರಿಗೆ ಧನ್ಯವಾದಗಳು. ಸಿಎಂ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ, ನಮಗೆ ರಾಜ್ಯದ ಜನರ ಸೇವೆ ಮಾಡೋ ಮನಸ್ಸಿದೆ. ನಾನು ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದಿದ್ದೇನೆ, ಕಾಂಗ್ರೆಸ್ನವರಿಗೆ ಉತ್ತರ ಕೊಡುವ ಅಗತ್ಯ ನನಗಿಲ್ಲ ಎಂದರು.
ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ತಪ್ಪಿದ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಯಾವ ಫಾರ್ಮುಲಾ ಮಾಡಿದೆಯೋ ಗೊತ್ತಿಲ್ಲ, ಅದು ಅವರ ನಿರ್ಧಾರ. ಬೆಳಗಾವಿ ಜಿಲ್ಲೆ ದೊಡ್ಡದು ಹಾಗಾಗಿ ಹೆಚ್ಚು ಸಚಿವ ಸ್ಥಾನ ಕೊಡ್ತಿದ್ದಾರೆ. ಕುಮಟಳ್ಳಿಗೆ ಮಂತ್ರಿ ಸ್ಥಾನ ತಪ್ಪಿದ್ದು, ಹೈಕಮಾಂಡ್ ನಿರ್ಧಾರ. ಸುವರ್ಣಸೌಧದಲ್ಲಿ ಮುಂದೆ ಅಧಿವೇಶನ ನಡೆಯಲಿದೆ. ಅಲ್ಲಿ ಕೆಲ ಇಲಾಖೆಗಳ ಕಚೇರಿಗಳನ್ನು ಶಿಫ್ಟ್ ಮಾಡುವ ಬಗ್ಗೆ ಸಿಎಂ ಜೊತೆ ಮಾತಾಡಿದ್ದೇನೆ, ಆ ಪ್ರಕಾರವೇ ಮಾಡ್ತೇವೆ. ಉಮೇಶ್ ಕತ್ತಿಗೆ ಸಚಿವ ಸ್ಥಾನ ತಪ್ಪಿದ್ದು ಕೂಡಾ ಹೈಕಮಾಂಡ್ ನಿರ್ಧಾರ. ಈ ಬಗ್ಗೆ ನಾನು ಹೆಚ್ಚು ಮಾತಾಡಲು ಬರಲ್ಲ. ಇದೇ ಫೈನಲ್ ಅಲ್ಲ ಕತ್ತಿಯವರಿಗೆ ಮುಂದೆ ಅವಕಾಶ ಸಿಗಬಹುದು ಎಂದರು.