ಬೆಂಗಳೂರು: ಪೇಜಾವರ ಶ್ರೀಗಳ ಬೃಂದಾವನ ನಿರ್ಮಾಣವಾಗಲಿದೆ. ಅಂತಿಮ ವಿಧಿ-ವಿಧಾನ ಕಾರ್ಯಗಳ ಬಗ್ಗೆ ವಿದ್ಯಾಪೀಠ ಮಠದ ನಿವೃತ್ತ ಉಪನ್ಯಾಸಕ ಶ್ರೀರಾಮ ವಿಠಲಾಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮ ವಿಠಲಾಚಾರ್ಯ, ವಿದ್ಯಾಪೀಠದ ಮಠದ ಆವರಣದಲ್ಲಿರುವ ಶ್ರೀಕೃಷ್ಣ ದೇವಾಲಯದ ಪಕ್ಕದಲ್ಲಿ ಶ್ರೀಗಳು ಗುರುತಿಸಿರುವ ಜಾಗದಲ್ಲಿ ಪೇಜಾವರ ಶ್ರೀಗಳ ಬೃಂದಾವನ ನಿರ್ಮಾಣವಾಗಲಿದೆ. ಅಂತಿಮ ವಿಧಿ ವಿಧಾನದ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಉಡುಪಿಯಲ್ಲಿ ವಿಧಿ-ವಿಧಾನಗಳು ನಡೆದಿದೆ. ಮಠದ ಆವರಣದಲ್ಲಿರುವ ಕೃಷ್ಣನ ದೇವಾಲಯದ ಕೃಷ್ಣನ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಮುಂದಿನ ಕಾರ್ಯ ಮುಂದುವರೆಯುವುದು. ಶ್ರೀಗಳು ಈ ಹಿಂದೆ ಹೇಳಿದ ವಿಧಿ-ವಿಧಾನಗಳಲ್ಲಿ ಅವರ ಅಂತಿಮ ಕಾರ್ಯ ನಡೆಸಲಾಗುತ್ತದೆ. ಶ್ರೀಗಳ ಅಂತಿಮ ಇಚ್ಛೆ ಕೂಡಾ ಅದೇ ಆಗಿದ್ದು, ಅವರು ತೋರಿಸಿದ ಸ್ಥಳದಲ್ಲಿ ಈಗ ಬೃಂದಾವನ ನಿರ್ಮಾಣವಾಗುತ್ತಿದೆ.
ಬೃಂದಾವನ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಕಳಸವನ್ನು ಅಭಿಮಂತ್ರಿಸಿ ಪಾರ್ಥಿವ ಶರೀರವನ್ನು ಗುಂಡಿಯಲ್ಲಿ ಕೂರಿಸುತ್ತಾರೆ. ಜೊತೆಗೆ ಆ ಗುಂಡಿಯ ಒಳಗೆ ಶ್ರೀಗಳು ಇಷ್ಟಪಟ್ಟಂತಹ ವಸ್ತುಗಳ ಜೊತೆಗೆ, ಉಪ್ಪು ಪಚ್ಚಕರ್ಪೂರ ಕಾಳು ಮೆಣಸುಗಳನ್ನು ಹಾಕುತ್ತಾರೆ. ಜತೆಗೆ ಸಾಲಿಗ್ರಾಮವನ್ನು ಶ್ರೀಗಳ ತಲೆ ಮೇಲೆ ಇಡುತ್ತಾರೆ. ನಂತರ ಬೃಂದಾವನ ನಿರ್ಮಾಣ ಮಾಡಿ ಪೂಜೆ ಪುನಸ್ಕಾರ ನಡೆಯುತ್ತದೆ.
ಸುಮಾರು ಎಲ್ಲಾ ವಿಧಿ-ವಿಧಾನ ಎರಡು ಗಂಟೆ ಕಾಲ ನಡೆಯಲಿದೆ. ಶ್ರೀಗಳ ಗರಡಿಯಲ್ಲಿ ತಯಾರಾಗಿರುವ ವಿಷ್ಣುಮೂರ್ತಿ ಆಚಾರ್ಯ ಎಂಬುವರ ತಂಡ ಹಾಗೂ ಬೇರೆ ಬೇರೆ ಪುರೋಹಿತರುಗಳು ಸೇರಿ ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನೆರವೇರಿಸುತ್ತಾರೆ ಎಂದು ಮಾಹಿತಿ ನೀಡಿದರು.