ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಹಾಸ್ಯ ನಟ ಕೆಂಪೇಗೌಡ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ 'ಕಟ್ಲೆ'. ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿರೋ ಕಟ್ಲೆ ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ಅನಾವರಣಗೊಳಿಸಿದ್ದಾರೆ. ಶ್ರೀವಿಧ ನಿರ್ದೇಶನದ ಕಟ್ಲೆ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್ ನೀಡಿದ್ದಾರೆ.
ಹೌದು, ಈ ಚಿತ್ರದ ಮೊದಲ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ಯಾರೋ ನಾ ಕಾಣೆ ಚಂದಾಗೌಳೆ ಶಾನೆ ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡ ಅಭಿಪ್ರಾಯ ಹಂಚಿಕೊಂಡಿದೆ.
ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ನಾನು ಆಭಾರಿ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಶ್ರೀವಿಧ ಅವರು "ಕಟ್ಲೆ" ಚಿತ್ರಕ್ಕೆ ಅದ್ಭುತ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಬರೆದು ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದು ತಿಳಿಸಿದರು.
ನಂತರ ನಿರ್ದೇಶಕ ಶ್ರೀವಿಧ ಮಾತನಾಡಿ, ಈ ಚಿತ್ರ ಉತ್ತಮವಾಗಿ ಮೂಡಿಬರಲು ಮುಖ್ಯ ಕಾರಣ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ಭರತ್ ಗೌಡ ಅವರು. ನಿರ್ಮಾಪಕರು ನಮ್ಮ ಮೇಲೆ ನಂಬಿಕೆಯಿಟ್ಟು ಬಂಡವಾಳ ಹಾಕಿರುವುದೇ ನಮ್ಮ ಕನಸು ನನಸಾಗಲು ಕಾರಣ. ಅವರಿಗೆ ಹಾಗೂ ನನ್ನ ತಂಡಕ್ಕೆ ಧನ್ಯವಾದಗಳು. ನಮ್ಮ ಚಿತ್ರದ ಪ್ರಥಮ ಹಾಡು ಇಂದು ಬಿಡುಗಡೆಯಾಗಿದೆ. ಸದ್ಯದಲ್ಲೇ "ಕಟ್ಲೆ" ಸೆನ್ಸಾರ್ ತಲುಪಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಣ್ಬೀರ್, ಅಲ್ಲು ಅರ್ಜುನ್ - ಪತ್ನಿ ಪಾತ್ರದಲ್ಲಿ ರಶ್ಮಿಕಾ: ಮಂದಣ್ಣ ಎದುರು ತಲೆಬಾಗಿದ ಆ್ಯಕ್ಷನ್ ಸ್ಟಾರ್ಸ್
ಈ ಚಿತ್ರದಲ್ಲಿ ಕೆಂಪೇಗೌಡ ಜೊತೆಯಾಗಿ ಅಮೃತ ರಾಜ್, ಸಂಹಿತ ಇಬ್ಬರು ಜೋಡಿಯಾಗಿದ್ದಾರೆ. ಇವರ ಜೊತೆ ಉಮೇಶ್, ತಬಲ ನಾಣಿ, ಹರೀಶ್ ರಾಜ್, ಕರಿಸುಬ್ಬು ನಟಿಯರಾದ ಶೃತಿ, ನಿಸರ್ಗ ಅಪ್ಪಣ್ಣ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: 'ಟೈಗರ್ ಶ್ರಾಫ್ ಕಾಣುವುದಕ್ಕಿಂತಲೂ ಹೆಚ್ಚು ಅದ್ಭುತ': 'ಬಾಘಿ 4' ನಿರ್ದೇಶಕ ಹರ್ಷ ಹೇಳಿದ್ದಿಷ್ಟು
ಈ ಸಿನಿಮಾವನ್ನು ನಿರ್ಮಾಪಕ ಭರತ್ ಗೌಡ ನಿರ್ಮಾಣ ಮಾಡಿದ್ದು, ವೇದಾರ್ಥ್ ಜಯಕುಮಾರ್ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್ ಹಾಗೂ ಚೇತನ್ ಕುಮಾರ್ ಮತ್ತು ಕಿನಾಲ್ ರಾಜ್ ಗೀತರಚನೆಯಿದ್ದು, ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಹಾಡಿನಿಂದ ಗಮನ ಸೆಳೆಯುತ್ತಿರೋ ಕಟ್ಲೆ ಚಿತ್ರವನ್ನು ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.