ಬೆಂಗಳೂರು: ಮಹರ್ಷಿ ವಾಲ್ಮೀಕಿ ಪೀಠಾಧೀಶರಾದ ಶ್ರೀ ಪ್ರಸನ್ನಾನಂದಸ್ವಾಮೀಜಿಯವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಾಲ್ಮೀಕಿ ನಾಯಕ ಸಮುದಾಯದ ಮೀಸಲು ಪ್ರಮಾಣ ಹೆಚ್ಚಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.
ರಾಜ್ಯದ ಪರಿಶಿಷ್ಟ ಪಂಗಡಗಳ ಪೈಕಿ ಅತ್ಯಧಿಕ ಸಂಖ್ಯೆಯಲ್ಲಿರುವ ವಾಲ್ಮೀಕಿ(ನಾಯಕ) ಸಮುದಾಯದ ಮೀಸಲಾತಿ ಪ್ರಮಾಣ ಶೇ. 3.5 ರಿಂದ ಶೇ. 7.5 ಕ್ಕೆ ಏರಿಸಬೇಕು ಎನ್ನುವ ಬೇಡಿಕೆಯನ್ನು ಬಹುದಿನಗಳಿಂದ ಸರ್ಕಾರದ ಮುಂದಿಡುತ್ತಾ ಬರಲಾಗಿದೆ. ಈಗಾಗಲೇ ಸಮುದಾಯದ ನಾಯಕರು, ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು ಸಾಕಷ್ಟು ಒತ್ತಡ ಹೇರುತ್ತಿದ್ದಾರೆ. ಇಂದು ಕೂಡ ಇದೇ ನಿಟ್ಟಿನಲ್ಲಿ ಒತ್ತಡ ಹೇರುವ ಕಾರ್ಯವನ್ನು ಶ್ರೀಗಳು ಮಾಡಿದರು.
ಸಾಮಾಜಿಕ ಗಣತಿಯಲ್ಲಿ ವಾಲ್ಮೀಕಿ ಸಮುದಾಯ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳ ಪ್ರಸ್ತಾಪಕ್ಕೆ ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭ ತಾತ್ವಿಕ ಒಪ್ಪಿಗೆ ಸೂಚಿಸಿದ್ದಿರಿ. ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ, ಸಮುದಾಯಕ್ಕೆ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗುತ್ತದೆ. ಈ ಬಾರಿಯ ವಿಧಾನ ಮಂಡಲ ಅಧಿವೇಶನದಲ್ಲಿ ನಮ್ಮ ಸಮಸ್ಯೆಯ ಕುರಿತು ಗಮನ ಹರಿಸಬೇಕು. ಸರ್ಕಾರದ ಗಮನಕ್ಕೆ ತರುವಂತೆ ಹಾಗೂ ಜಾರಿಗೆ ಒತ್ತಡ ಹೇರುವಂತೆ ಮನವಿ ಮಾಡಿದರು.
ಈ ವೇಳೆ ಶಾಸಕರಾದ ರಘುಮೂರ್ತಿ, ನಾಗೇಂದ್ರ, ಗಣೇಶ್, ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಹಾಜರಿದ್ದರು.