ಬೆಂಗಳೂರು: ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಂಡು ಪ್ರಣಬ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಎರಡು ನಿಮಿಷ ಮೌನ ಆಚರಿಸಿ ನಂತರ ಸಭೆ ಆರಂಭಿಸಿ ಪ್ರಣಬ್ ಅವರ ಗುಣಗಾನ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮುಖಂಡರಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಚಂದ್ರಪ್ಪ ಭಾಗಿಯಾಗಿದ್ದರು.
ಸಾಕಷ್ಟು ನಾಯಕರು ಆಗಮಿಸುವ ಹಿನ್ನೆಲೆ ಇಂದಿನ ಸಭೆಯಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿರುವುದು ಗಮನಕ್ಕೆ ಬಂತು. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಫೇಸ್ ಶೀಲ್ಡ್, ಗ್ಲೌಸ್ ಹಾಕಿಕೊಂಡು ಬಂದಿದ್ದರೆ, ಮಲ್ಲಿಕಾರ್ಜುನ ಖರ್ಗೆ ಮಾಸ್ಕ್, ಗ್ಲೌಸ್ ತೊಟ್ಟು ಆಗಮಿಸಿದ್ದರು.