ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆ ಇಲ್ಲದೆ ಕೋವಿಡ್ ರೋಗಿಗಳು ನರಳಾಡುವಂತಾಗಿದೆ. ಈ ಹಿನ್ನೆಲೆ ಆಕ್ಸಿಜನ್ ಪೂರೈಕೆ ಹೆಚ್ಚಳದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.
ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತಮಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರ ಕೋವಿಡ್ ನಿಯಂತ್ರಣ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಹಲವಾರು ಕ್ರಮ ಕೈಗೊಳ್ಳುತ್ತಿವೆ. ನಗರದಲ್ಲಿ ಆಕ್ಸಿಜನ್ ಜೊತೆ ಆಕ್ಸಿಜನ್ ಸಿಲಿಂಡರ್ಗಳ ಕೊರತೆಯೂ ಇದೆ. ಹಾಗಾಗಿ ಬೇರೆ ಬೇರೆ ರಾಜ್ಯಗಳಿಂದ ಆಕ್ಸಿಜನ್ ಪಡೆದುಕೊಳ್ಳವ ಕ್ರಮ ಕೈಗೊಳ್ಳಲಾಗ್ತಿದೆ ಎಂದರು.
ಇನ್ನು ಹಾಸಿಗೆ ಕೊರತೆ ನೀಗಿಸಲು ಖಾಸಗಿ ಆಸ್ಪತ್ರೆಗಳ ಜೊತೆಗೆ ಬೇರೆ ಬೇರೆ ಕ್ರಮ ತೆಗೆದುಕೊಳ್ಳಲಾಗ್ತಿದೆ. ಪ್ರೈವೇಟ್ ಸಿಸಿಸಿ ಸೆಂಟರ್ ಅಥವಾ ಸ್ಟೆಪ್ ಡೌನ್ ಆಸ್ಪತ್ರೆ ಆರಂಭ ಮಾಡಲಾಗ್ತಿದೆ. ಯಾರಾದ್ರು ಖಾಸಗಿ ಆಸ್ಪತ್ರೆಗಳು ಹೋಟೆಲ್ ಜೊತೆ ಟೈ ಅಪ್ ಮಾಡಿಕೊಳ್ಳಲು ಮುಂದೆ ಬಂದರೆ ಹೋಟೆಲ್ ಜಾಗದಲ್ಲಿ ಈ ಸಿಸಿಸಿ ಕೇಂದ್ರ ಅಥವಾ ಸ್ಟೆಪ್ ಡೌನ್ ಆಸ್ಪತ್ರೆ ಮಾಡಬಹುದು. ಖಾಸಗಿ ಆಸ್ಪತ್ರೆಗಳಿಂದ ಬೆಡ್ ಪಡೆಯಲು ಡ್ರೈವ್ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ಜಂಟಿಯಾಗಿ ಈ ಕಾರ್ಯ ಮಾಡಲಾಗ್ತಿದೆ. ಸದ್ಯ 7500ರಿಂದ 11 ಸಾವಿರಕ್ಕೆ ಬೆಡ್ ಸಂಖ್ಯೆ ಹೆಚ್ಚಿಸಬೇಕಿದೆ ಎಂದರು.
ಇನ್ನು ಪಾರ್ಕ್, ಮೈದಾನಗಳಿಗೆ ಕಡಿವಾಣ ಹಾಕುವ ಬಗ್ಗೆ ಪ್ರತಿಕ್ರಿಯಿಸಿ, ಕೋವಿಡ್ ವೈರಸ್ ಹೆಚ್ಚು ಜನಸಂದಣಿ ಜಾಗದಲ್ಲಿ ಹಬ್ಬುತ್ತದೆ. ಹೀಗಾಗಿ ರೆಸ್ಟೋರೆಂಟ್, ಬಾರ್ಗಳಿಗೂ ಕಡಿವಾಣ ಹಾಕಲಾಗಿದೆ. ಪಾರ್ಕ್, ಮೈದಾನದಂತಹ ಓಪನ್ ಜಾಗದಲ್ಲಿ ಅಷ್ಟು ಹರಡುವುದಿಲ್ಲ. ಹಾಗಾಗಿ ಆ ಪ್ರದೇಶಗಳಿಗೆ ಹೆಚ್ಚು ಕಟ್ಟುನಿಟ್ಟು ಮಾಡಲಾಗಿಲ್ಲ ಎಂದರು.