ಬೆಂಗಳೂರು: 3 ತಿಂಗಳ ಲಾಕ್ಡೌನ್ನಿಂದ ಬ್ರಿಗೇಡ್ ರಸ್ತೆಯ ಅಂಗಡಿ ಮಾಲೀಕರು ಬಾಡಿಗೆ ಕಟ್ಟಲಾಗದೆ ನಷ್ಟದಿಂದ ವ್ಯಾಪಾರ ಸ್ಥಗಿತಗೊಳಿಸಬೇಕಾಗುತ್ತಿದೆ ಎಂದು ಬ್ರಿಗೇಡ್ ಅಂಗಡಿ ಹಾಗೂ ಸ್ಥಾಪನೆಗಳ ಒಕ್ಕೂಟದ ಕಾರ್ಯದರ್ಶಿ ಸುಹೈಲ್ ಯುಸಫ್ ಈಟಿವಿ ಭಾರತ್ಗೆ ತಿಳಿಸಿದರು.
ದಿನನಿತ್ಯದ ವ್ಯಾಪಾರ ಪ್ರಮಾಣದಲ್ಲಿ ಶೇಕಡ 80% ರಷ್ಟು ಕುಸಿತ ಕಂಡಿದ್ದು, ಆಗುವ 20% ವ್ಯಾಪಾರದಲ್ಲಿ ಬಾಡಿಗೆ, ಸಂಬಳ ಹಾಗೂ ವಿದ್ಯುತ್ ದರವನ್ನು ನಿಭಾಯಿಸಲಾಗದೆ ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 25 ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಬ್ರಿಗೇಡ್ ರಸ್ತೆಯ ಅಂಗಡಿಗಳ ಕೆಲ ಮಾಲೀಕರು ಹೇಳುತ್ತಿದ್ದಾರೆ.
ಸದ್ಯಕ್ಕೆ ಬ್ರಿಗೇಡ್ ರಸ್ತೆಯಲ್ಲಿ ಪ್ರತಿ ಚದುರಡಿ ಬಾಡಿಗೆ 250 ರಿಂದ 400 ರೂ. ಇದೆ. ಇದರ ಜೊತೆಗೆ ವಿದ್ಯುತ್ ದರ, ಅಂಗಡಿಯಲ್ಲಿ ಕಾರ್ಮಿಕರ ವೇತನ ಇರುತ್ತದೆ. ಸದ್ಯ ವಹಿವಾಟಿಲ್ಲದೇ ನಷ್ಟದಲ್ಲಿರುವ ವ್ಯಾಪಾರಸ್ಥರು ಅಂಗಡಿಗಳನ್ನು ನಡೆಸುವ ಸ್ಥಿತಿಯಲ್ಲಿ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದಿನಕ್ಕೆ ಲಕ್ಷಾಂತರ ರೂ. ವಹಿವಾಟು ನಡೆಸುವ ಬ್ರಿಗೇಡ್ ರಸ್ತೆಯ ಮಳಿಗೆಗಳಲ್ಲಿ ಪಾದರಕ್ಷೆಯಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನದ ಟಿವಿಗಳನ್ನು ಮಾರಾಟ ಮಾಡಲಾಗುತ್ತದೆ. ವೀಕ್ ಎಂಡ್ ಬಂದರೆ ಸಾಕು ಗಾಡಿಗಳ ಪಾರ್ಕಿಂಗ್ ಇರಲಿ ಜನ ಸಂಚಾರಕ್ಕೂ ಕಷ್ಟವಾಗುತ್ತಿದ್ದ ಬ್ರಿಗೇಡ್ ರಸ್ತೆ ಸದ್ಯ ಭಣಗುಡುತ್ತಿದೆ.