ಮಾಡಾಳ್ ತಪ್ಪು ಮಾಡಿದ್ದಾರೆ, ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ: ಶೋಭಾ ಕರಂದ್ಲಾಜೆ - ಬಿಜೆಪಿ ಕಚೇರಿಯಲ್ಲಿ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ
ಮಾಡಾಳ್ ವಿರೂಪಾಕ್ಷಪ್ಪ ತಪ್ಪು ಮಾಡಿದ್ದರೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗಲಿದೆ. ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಪ್ಪು ಮಾಡಿದ್ದಾರೆ. ತಪ್ಪು ಮಾಡಿದ್ದಕ್ಕೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗುತ್ತದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನಂತೆ ಏನು ಕ್ರಮ ಆಗಬೇಕೋ ಅದು ಆಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮ ಪಕ್ಷ ಹಲವಾರು ಬಾರಿ ಉತ್ತರ ಹೇಳಿದೆ. ಅವರು ತಪ್ಪು ಮಾಡಿದ್ದಾರೆ, ತಪ್ಪು ಮಾಡಿದ್ದಕ್ಕೆ ಅವರಿಗೆ ಅವರದ್ದೇ ಆದ ರೀತಿಯಲ್ಲಿ ಹಾಗೂ ಕಾನೂನು ರೀತಿಯಲ್ಲಿ ಶಿಕ್ಷೆ ಆಗಲಿದೆ. ಈ ಘಟನೆ ಬಹಿರಂಗವಾದಗಿನಿಂದ ಹಲವಾರು ಪ್ರಶ್ನೆಗಳನ್ನ ನಮ್ಮ ನಾಯಕರಿಗೆ ಮಾಧ್ಯಮದವರು ಕೇಳಿದ್ದಾರೆ. ಎಲ್ಲದಕ್ಕೂ ಪಕ್ಷ ಸ್ಪಷ್ಟೀಕರಣ ನೀಡಿದೆ ಎಂದರು.
ಸಚಿವರಾದ ವಿ.ಸೋಮಣ್ಣ, ನಾರಾಯಣಗೌಡ ಸೇರಿದಂತೆ ಯಾರು ನಮ್ಮ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ದೇಶದಲ್ಲಿ ಯಾವುದಾದರೂ ಒಂದು ನಂಬಲು ಸಾಧ್ಯವಾಗುವಂತಹ ನೇತೃತ್ವ ಇದ್ದರೆ ಅದು ನರೇಂದ್ರ ಮೋದಿ ಅವರು ಮಾತ್ರ. ಮೋದಿ ಅವರ ನೇತೃತ್ವವನ್ನು ಬಿಟ್ಟು ಮತ್ತೆ ಯಾವ ಪಕ್ಷಕ್ಕೆ ಹೋಗುತ್ತಾರೆ?, ಅದು ಕೂಡ ಅಸ್ತಿತ್ವವೇ ಇಲ್ಲದ ಹಾಗೂ ಹಲವಾರು ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದು ನಂಬಲು ಸಾಧ್ಯವಿಲ್ಲ. ಹಾಗಾಗಿ, ಯಾರು ನಮ್ಮ ಪಕ್ಷವನ್ನು ಬಿಡುವುದಿಲ್ಲ, ನಮ್ಮ ಪಕ್ಷದಲ್ಲಿ ಅವರು ಮುಂದುವರೆಯಲಿದ್ದಾರೆ ಎಂದರು.
ಸೋಮಣ್ಣ ಪಕ್ಷದಿಂದ ಅಂತರ ಕಾಯ್ದುಕೊಂಡಿಲ್ಲ, ನಾನು ಕೂಡ ಅವರ ಜೊತೆ ಯಾತ್ರೆಯಲ್ಲಿ ಭಾಗವಹಿಸಿದ್ದೆ. ಅವರು ಅವರ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇತರೆ ಸಮಯದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಚುನಾವಣೆಯಲ್ಲಿ ಅವರು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನಿಂತ ನೀರಲ್ಲ, ಹರಿಯುವ ನೀರು ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದನ್ನ ಅವರಿಗೆ ಕೇಳಬೇಕು. ಆದರೆ, ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು, ಅತ್ಯಂತ ಪ್ರಭಾವಿ ನಾಯಕರು, ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಈ ಬಾರಿ ಟಿಕೆಟ್ ಕೊಡುವುದು ಕಷ್ಟ : ಡಿ ವಿ ಸದಾನಂದ ಗೌಡ
ಪರಿಷತ್ ಸದಸ್ಯ ಪುಟ್ಟಣ್ಣ ಬಿಜೆಪಿಯಿಂದ ಹೊರಹೋಗಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೈಗೆ ಎಟುಕದ ದ್ರಾಕ್ಷಿ ಹುಳಿ ಎನ್ನುವ ಗಾದೆ ಮಾತಿನಂತೆ ಯಾವುದೋ ನಿರೀಕ್ಷೆ ಇರಿಸಿಕೊಂಡು ಬಿಜೆಪಿಗೆ ಬಂದಿದ್ದರು. ಬಿಜೆಪಿಯಿಂದ ಪರಿಷತ್ ಸದಸ್ಯರಾಗಿದ್ದರು. ಅದನ್ನು ಅವರು ಮರೆಯಬಾರದು. ಅವರನ್ನು ಎಂಎಲ್ಸಿ ಮಾಡಿದ್ದರೂ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರೆ ಇನ್ಯಾವುದೋ ಕಾರಣಕ್ಕೆ ಆಸೆಗೆ ಬಿದ್ದು ಹೋಗಿರಬಹುದು. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಯಾವ ಪಕ್ಷಕ್ಕೆ ಹೋಗಿದ್ದಾರೆ ಎನ್ನುವುದನ್ನು ಯೋಚಿಸಬೇಕು ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಲೋಕಾಯುಕ್ತರ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಚುನಾವಣೆ ಹತ್ತಿರ ಬಂದಾಗ ಈ ರೀತಿಯ ವ್ಯಕ್ತಿಗಳು ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಅವರು ಯಾವಾಗ ಪರಿಷತ್ ಸದಸ್ಯರಾಗಿದ್ದರೋ ಆಗ ಈ ಮಾತನ್ನ ಹೇಳಿದ್ದರೆ, ಪರಿಷತ್ ಸ್ಥಾನ ಬೇಡ ಎಂದಿದ್ದರೆ ಈ ಮಾತಿಗೆ ಬೆಲೆ ಬರುತ್ತಿತ್ತು ಹಾಗೂ ಅರ್ಥ ಇರುತ್ತಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾತನಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಸಂಪೂರ್ಣ ರಾಜಕೀಯದ ಗಿಮಿಕ್ ಎಂದರು.