ಬೆಂಗಳೂರು : ನಿನ್ನೆ ರಾತ್ರಿ ಇಡಿ ಸಮನ್ಸ್ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ನನ್ನನ್ನು ಟಾರ್ಗೆಟ್ ಮಾಡಿ ಇಡಿ ದಾಳಿ ನಡೆಸಲಾಗಿದೆ ಎಂದಿದ್ದಾರೆ.
ನಾನು ಕಾರ್ಯಕರ್ತನಾಗಿ ನನ್ನ ಕಾರ್ಯವನ್ನು ಮಾಡಿದ್ದೇನೆ ಅಷ್ಟೆ. ನನಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿದೆ. ನಿನ್ನೆ ರಾತ್ರಿ 10 ಗಂಟೆಗೆ ಇಡಿ ನಮಗೆ ಸಮನ್ಸ್ ನೀಡಿದೆ. ಆದರೆ, ಮೇಲ್ಮನವಿ ಸಲ್ಲಿಸಲು ನನಗೆ ಕಾಲಾವಕಾಶ ಬೇಕಿದೆ ಎಂದು ತಿಳಿಸಿದ್ದಾರೆ.
ನಾನು ಯಾವುದೇ ಮರ್ಡರ್ ಮಾಡಿಲ್ಲ, ತಪ್ಪು ಮಾಡಿಲ್ಲ ನ್ಯಾಯಬದ್ದವಾಗಿ ಬದುಕಿದ್ದೇನೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ದೆಹಲಿಗೆ ಹೋಗಿ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ನಾನು ಹೆದರಿಕೊಂಡು ಓಡಿ ಹೋಗೋ ಮಗಾ ಅಲ್ಲಾ. ಎಲ್ಲವನ್ನೂ ನಿಂತು ಎದುರಿಸುತ್ತೇನೆ ಎಂದು ಗುಡುಗಿದ್ದಾರೆ. ಎಲ್ಲ ನನ್ನ ತಾಯಿಯ ಆಸ್ತಿ ಹಾಗೂ ಕುಟುಂಬದ ಆಸ್ತಿಯನ್ನ ಬೇನಾಮಿ ಅಂತಾ ತೀರ್ಮಾನ ಮಾಡಿದ್ದಾರೆ. ಈ ಬಗ್ಗೆ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ಇದ್ರ ಬಗ್ಗೆ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ನಾನು ಕೆಂಪೇಗೌಡರ ಮಗ ಹೆದರುವ ಪ್ರಶ್ನೆಯೇ ಇಲ್ಲ:
ನಾನು ಕೆಂಪೇಗೌಡರ ಮಗ ಹೆದರಿ ಪಲಾಯಣ ಮಾಡುವವನು ಅಲ್ಲ. ಧೈರ್ಯದಿಂದ ಎಲ್ಲವನ್ನು ನಿಭಾಯಿಸ್ತಿನಿ. ನನನ್ನು ರಾಜಕೀಯವಾಗಿ ಮುಗಿಸಲು ಕುತಂತ್ರ ನಡೆಸಿ ಈಗಾಗ್ಲೆ ಪ್ಲಾನ್ ಮಾಡಿದ್ದಾರೆ ಎಂದರು.
ಪಕ್ಷಕ್ಕಾಗಿ ಇದೆಲ್ಲಾ:
ನಾನು 49ವರ್ಷಗಳಿಂದ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ನಾಯಕನಾಗಿ ಪಕ್ಷ ಕೊಟ್ಟ ಜವಾಬ್ದಾರಿಯಂತೆ
ಗುಜಾರಾತ್, ಮಹಾರಾಷ್ಟ್ರ ಹಾಗೂ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಕಾಪಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ಭಾರತೀಯ ಜನತಾ ಪಾರ್ಟಿ ನನ್ನನ್ನು ಗುರಿಯಾಗಿಸಿಕೊಂಡು, ನನ್ನ ಕುಟುಂಬ, ಸ್ನೇಹಿತರು, ಕಾರ್ಯಕರ್ತರು, ಮುಖಂಡರ ಮೇಲೆ ದಾಳಿ ಮಾಡಿತ್ತು. ಹೆದರಿ ಓಡಿ ಹೋಗುವವನು ನಾನಲ್ಲ ಯಾರೆ ಟಾರ್ಗೇಟ್ ಮಾಡಲಿ ಎದುರಿಸೋಕೆ ನಾನು ರೆಡಿ ಎಂದಿದ್ದಾರೆ.
ಈಗಾಗ್ಲೆ ನನ್ನ ಟಾರ್ಗೆಟ್ ಮಾಡಲಾಗಿದೆ. ನಾನು ಆ ರಾಜಕಾರಣಿಗಳ ಹೆಸರು ಹೇಳಲು ಇಷ್ಟ ಪಡಲ್ಲ. ಕಾನೂನು, ನ್ಯಾಯಾಲಯಕ್ಕೆ ಗೌರವ ಕೊಡ್ತಿನಿ, ಆದಾಯ ತೆರಿಗೆ ಇಲಾಖೆ ಅನೇಕ ಸಂದರ್ಭದಲ್ಲಿ ನೋಟಿಸ್ ನೀಡಿದೆ. ನಾನು ಆದಾಯ ತೆರಿಗೆ ಇಲಾಖೆಯವರಿಗೆ ಉತ್ತರ ಕೊಟ್ಟಿದ್ದೆನೆ. ಹಾಗೆ ನನ್ನ 84ವರ್ಷದ ತಾಯಿಯನ್ನು ಕೂಡ ಐಟಿ ವಿಚಾರಣೆ ನಡೆಸಿದೆ. ನನ್ನ ತಾಯಿಗೆ ಇಬ್ಬರು ಗಂಡು ಮಕ್ಕಳು, ನಾವು ಕಷ್ಟ ಪಟ್ಟು ಆಸ್ತಿ ಸಂಪಾದನೆ ಮಾಡಿರುವಂತದ್ದು, ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ ಎಂದರು.
ಯಡಿಯೂರಪ್ಪನವರಿಗೆ ಧನ್ಯವಾದ :
ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧನ್ಯವಾದ. ಧ್ವೇಷದ ರಾಜಕಾರಣ ಮಾಡಲ್ಲ ಎಂದು ವಿಧಾನಸೌಧದಲ್ಲಿ ಹೇಳಿದ್ರು. ಆದ್ರೆ ಈಗ ಏನು ಮಾಡ್ತಿದ್ದೀರಾ ಯಡಿಯೂರಪ್ಪ ನವರೇ. ನಮ್ಮ ಅವಧಿಯಲ್ಲಿ ಜಾರಿಯಾಗಿದ್ದ ಎಲ್ಲಾ ಯೋಜನೆಗಳನ್ನು ತಡೆದಿದ್ದಾರೆ. ಹಾಗೆ ನನ್ನ ಕನಸಿನಂತೆ ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ಮಾಡೋ ಯೋಜನೆ ಚಾಲ್ತಿಯಿತ್ತು, ಇದಕ್ಕೆ ತಡೆ ನೀಡಿದ್ದಾರೆ. ಮೆಡಿಕಲ್ ಕಾಲೇಜ್ ಕೆಲಸ ಪ್ರಾರಂಭವಾಗಬೇಕು. ಪ್ರಾಣ ಹೊದ್ರು ಚಿಂತೆ ಇಲ್ಲ. ಜನರಿಗಾಗಿ ನಾನು ಉಗ್ರ ಹೊರಾಟ ಮಾಡ್ತೀನಿ, ಕಾಲ ಚಕ್ರ ತಿರುಗುತ್ತಾ ಇರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.