ಬೆಂಗಳೂರು: ರಾಜ್ಯದ ಗಮನ ಸೆಳೆದಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಕಲ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.
ಇಂದಿನಿಂದ ಚುನಾವಣಾ ಸಿಬ್ಬಂದಿ, ಮಸ್ಟರಿಂಗ್ ಸೆಂಟರ್ನಿಂದ ಹೊರಹೋಗುವಂತಿಲ್ಲ. ಇವಿಎಂ ಪಡೆದು ಮಧ್ಯಾಹ್ನದ ನಂತರ ತಮಗೆ ಹಂಚಿಕೆಯಾದ ಮತಗಟ್ಟೆಗೆ ತೆರಳಬೇಕು. ನಾಳೆ ಚುನಾವಣೆ ಮುಗಿದ ಬಳಿಕ ವಾಪಾಸ್ ಸ್ಟ್ರಾಂಗ್ ರೂಂಗೆ ಇವಿಎಂಗಳನ್ನು ತಲುಪಿಸಿ, ಕರ್ತವ್ಯದಿಂದ ಹೋಗಬಹುದಾಗಿದೆ. ಈಗಾಗಲೇ ಶಿವಾಜಿನಗರ ಕ್ಷೇತ್ರದ ಮತಗಟ್ಟೆ ಸಂಖ್ಯೆಯನ್ನೂ ಹಂಚಿಕೆ ಮಾಡಲಾಗಿದೆ.
ಶಿವಾಜಿನಗರದಲ್ಲಿ ಒಟ್ಟು 193 ಮತಗಟ್ಟೆಗಳಿದ್ದು,1,93,844 ಒಟ್ಟು ಮತದಾರಿದ್ದಾರೆ. 98,024 ಪುರುಷ, 95,816 ಮಹಿಳಾ ಮತದಾರರಿದ್ದು,04 ಮಂದಿ ಇತರೆ ಮತದಾರರಿದ್ದಾರೆ. ಶಿವಾಜಿನಗರದಲ್ಲಿ 5 ಪಿಂಕ್ ಮತಗಟ್ಟೆಗಳಿದ್ದು, 24 ಸೂಕ್ಷ್ಮ ಹಾಗೂ 61ಅತಿಸೂಕ್ಷ್ಮ ಮತಗಟ್ಟೆಗಳಿವೆ.ಇನ್ನು ಚುನಾವಣಾ ಕರ್ತವ್ಯಕ್ಕೆ 849 ಮಂದಿ ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಮೈಕ್ರೋ ಅಬ್ಸರ್ವರ್ಸ್ 72 ಮಂದಿ ಹಾಗೂ 500 ಪೊಲೀಸ್ ಸಿಬ್ಬಂದಿ,287 ಮಂದಿ ಸಿಆರ್ಪಿಎಫ್ ಯೋಧರು, 193 ಮಂದಿ ಪಿಎಸ್ಐಗಳ ನಿಯೋಜನೆ ಮಾಡಲಾಗಿದೆ. ಮಸ್ಟರಿಂಗ್ ಸೆಂಟರ್ಗೆ ಬೆಂಗಳೂರು ನಗರ ಚುನಾವಣಾ ಆಯುಕ್ತ ಬಿ.ಎಸ್. ಅನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.