ಬೆಂಗಳೂರು: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯೇ ಗೆಲ್ಲಲಿದ್ದಾರೆ. ಆ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಅಲ್ಲಿ ಕಾಂಗ್ರೆಸ್ ಗೆಲ್ಲಲ್ಲ, ಗೆಲ್ಲಲೂ ಬಿಡುವುದಿಲ್ಲ ಎಂದು ರಾಜ್ಯ ಚುನಾವಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ವಿಚಾರ ಮತ್ತು ಆದರ್ಶ ಇರಿಸಿಕೊಂಡು ಆರಂಭವಾಗಿರುವ ಪಕ್ಷ. ಜನಸಂಘದ ಕಾಲದಿಂದಲೇ ಇದೇ ವಿಚಾರದಲ್ಲಿ ಪಕ್ಷವನ್ನು ನಮ್ಮ ಹಿರಿಯರು ಬೆಳೆಸಿದ್ದಾರೆ. ನಮ್ಮ ವಿಚಾರ, ದೇಶಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಲೋಕಸಭೆಯಲ್ಲಿ ನಮ್ಮ ಪ್ರಾತಿನಿಧ್ಯ ಇರಬೇಕು ಎಂದು ನಮ್ಮ ಹಿರಿಯರು ಆರಂಭಿಸಿದರು.
ಶೆಟ್ಟರ್ ಕುಟಂಬದವರು ಹುಬ್ಬಳ್ಳಿಯಲ್ಲಿ ಜನಸಂಘ ಕಟ್ಟಿದರು. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ಮೇಯರ್ ಆಗಿದ್ದರು. ವಾಜಪೇಯಿ, ಅಡ್ವಾಣಿ ಯಾವುದೇ ಹಿರಿಯರು ಬಂದರೂ ಶೆಟ್ಟರ್ ಮನೆಗೆ ಮೊದಲು ಭೇಟಿ ನೀಡುತ್ತಿದ್ದರು. ಶೆಟ್ಟರ್ ಇಂದು ಅದನ್ನು ನೆನಪು ಮಾಡಿಕೊಂಡಿದ್ದಾರೆ. ಅವರು ಇಂದು ಕಾಂಗ್ರೆಸ್ ಮನೆಯಲ್ಲಿದ್ದಾರೆ. ಯಾವ ಕಾಂಗ್ರೆಸ್ ಅನ್ನು ಇಡೀ ಅವರ ಕುಟುಂಬ ವಿರೋಧಿಸಿತ್ತೋ ಅದೇ ಮನೆಗೆ ಹೋಗಿದ್ದಾರೆ. ರಾಜಕೀಯದ ಕೊನೆಯಲ್ಲಿ ಅವರು ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ತಂದೆ ತಾಯಿ ಇಂದು ಇದ್ದಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಗೊತ್ತಿಲ್ಲ.
ಆದರೆ ಶೆಟ್ಟರ್ ನಮ್ಮ ಹಿರಿಯ ನಾಯಕರು ಅವರ ಬಗ್ಗೆ ಗೌರವ ಇದೆ. ಅವರ ಕೈ ಕೆಳಗೆ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದೇನೆ. ಒಂದು ಕಾಲದಲ್ಲಿ ರಾಮಮಂದಿರಕ್ಕಾಗಿ ಹೋರಾಟ ಮಾಡಿ ಇಟ್ಟಿಗೆ ಹೊತ್ತಿರಿ, ಆದರೆ ಕಾಂಗ್ರೆಸ್ ರಾಮಮಂದಿರ ವಿರೋಧಿಗಳು, ಕಪಿಲ್ ಸಿಬಲ್ ರಾಮಮಂದಿರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ಮಾಡಿದ್ದರು. ಆರ್ಟಿಕಲ್ 370 ರದ್ದಿಗಾಗಿ ಹೋರಾಟ ಮಾಡಿದಿರಿ, ಕಾಂಗ್ರೆಸ್ ಅದನ್ನು ವಿರೋಧಿಸಿದೆ. ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370, ಸಿಎಎ ರದ್ದು ಮಾಡುವ ಹೇಳಿಕೆ ನೀಡಿದೆ.
ನೀವು ವಿಚಾರಕ್ಕೆ ಬದ್ಧರು ಎಂದುಕೊಂಡಿದ್ದೆವು. ವೀರಶೈವ ಲಿಂಗಾಯತ ಸಮುದಾಯ ಮೀಸಲಾತಿ ಹೋರಾಟ ಮಾಡಿತು, ಅನೈತಿಕವಾಗಿ ಸಂವಿಧಾನ ವಿರೋಧಿಯಾಗಿ ಕೇವಲ ಮತಕ್ಕಾಗಿ ನೀಡಿದ್ದ ಮುಸಲ್ಮಾನರ ಮೀಸಲಾತಿ ತೆಗೆದು ಮರು ಹಂಚಿಕೆ ಮಾಡಿದೆವು. ಇದನ್ನು ನೀವು ಸ್ವಾಗತ ಮಾಡಿದ್ದಿರಿ. ಆದರೆ ಕಾಂಗ್ರೆಸ್ ಮುಸ್ಲಿಮ್ ಮೀಸಲಾತಿ ಮತ್ತೆ ವಾಪಸ್ ಕೊಡುವುದಾಗಿ ಹೇಳಿದೆ. ನೀವು ಆ ಮುಖಂಡರ ಮನವೊಲಿಸುವ ಸ್ಥಿತಿಯಲ್ಲಿದ್ದೀರಾ? ಕಾಂಗ್ರೆಸ್ನಲ್ಲಿ ನಿಮ್ಮ ಸ್ಥಾನ ಏನು? ನಮ್ಮಲ್ಲಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ, ಸಿಎಂ ಸ್ಥಾನ ಸೇರಿ ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸ್ಥಾನದಲ್ಲಿದ್ದಿರಿ. ಅಲ್ಲಿ ಯಾವ ಸ್ಥಾನ ನಿಮಗೆ ಎಂದು ಪ್ರಶ್ನಿಸಿದರು.
ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಮೀಸಲಾತಿ ವಾಪಸ್ ವಿಚಾರದ ಹೇಳಿಕೆ ನೀಡಿದ್ದಾರೆ. ನಿಮ್ಮದೇ ಸಮುದಾಯಕ್ಕೆ ಕೊಟ್ಟ ಮೀಸಲಾತಿ ಕಿತ್ತುಕೊಳ್ಳುವ ಪಕ್ಷದಲ್ಲಿದ್ದೀರಿ, ಹಿಂದೆ ಬಿ ಬಿ ಶಿವಪ್ಪ ವಿರೋಧ ಪಕ್ಷದ ನಾಯಕರಾಗಬೇಕು ಎಂದಾಗ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಹೊಸ ಪೀಳಿಗೆಗೆ ಅವಕಾಶ ಕೊಡಬೇಕು ಎಂದು ಶೆಟ್ಟರ್ ಅವರನ್ನು ಆಯ್ಕೆ ಮಾಡಿದರು. ಅಂದು ಪಕ್ಷದ ಕಚೇರಿ ಗಾಜು ಪುಡಿಪುಡಿಯಾಯಿತು. ಆದರೂ ಶೆಟ್ಟರ್ಗೆ ಅವಕಾಶ ನೀಡಲಾಯಿತು. ಅಂದು ಇದೇ ಪ್ರಯೋಗದ ಮೂಲಕ ಶೆಟ್ಟರ್ಗೆ ಅವಕಾಶ ಕೊಡಲಾಗಿತ್ತು. ಇಂದು ಅದೇ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕೇವಲ ಒಂದು ಶಾಸಕ ಸ್ಥಾನಕ್ಕಾಗಿ ಅಲ್ಲಿಗೆ ಹೋಗಿದ್ದೀರಿ, ನಮ್ಮ ಪಕ್ಷ ಏನು ಕಡಿಮೆ ಮಾಡಿತ್ತು,?
ಬಿಜೆಪಿ ಬಿಟ್ಟು ಹೋದ ಮೇಲೆ ಇಲ್ಲಿರುವವರನ್ನು ತೆಗಳುವ ಕೆಲಸ ಮಾಡುವ ಅಗತ್ಯವಿರಲಿಲ್ಲ, ನಿಮ್ಮ ಹೃದಯ ಮುಟ್ಟಿ ನೋಡಿಕೊಳ್ಳಿ, ನಿಮ್ಮ ಹುಟ್ಟೇ ಜನಸಂಘದಲ್ಲಾಗಿತ್ತು. ಕೇವಲ ರಾಜಕೀಯಕ್ಕಾಗಿ ರಾಜಕೀಯ ಮಾಡುತ್ತಿರುವವರಿಗೆ ಸಮಾಜ, ಮತದಾರರಿಗೆ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಲ್ಲಿ ಶೆಟ್ಟರ್ ನಿಲುವೇನು?: ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡಿದ್ದ ಹುಡುಗನಿಗೆ ಟಿಕೆಟ್ ಕೊಟ್ಟಿದ್ದನ್ನು ಸ್ವಾಗತ ಮಾಡಬೇಕಿತ್ತು, ಅದನ್ನು ಬಿಟ್ಟು ಕಾಂಗ್ರೆಸ್ಗೆ ಹೋಗಿದ್ದೀರಿ. ಧ್ವಜ ಬದಲಾದ ಮಾತ್ರಕ್ಕೆ ವಿಚಾರವೂ ಬದಲಾಗುತ್ತಾ? ಇದಕ್ಕೆ ನೀವೇ ಉತ್ತರ ಹೇಳಬೇಕು. ಇಂದು ಬಿಜೆಪಿ ಬಗ್ಗೆ ಅವರು ಹೇಳಿದ ಒಂದೊಂದು ಮಾತಿನಲ್ಲೂ ಅರ್ಥ ಇದೆ. ಅಲ್ಲಿ ಹೋಗಿದ್ದೀರಿ, ಶುಭವಾಗಲಿದೆ. ಹೋದಮೇಲೆ ಹುಳುಕು ಮಾಡಬೇಡಿ ಎಂದು ಕುಟುಕಿದರು.
ಕಾಂಗ್ರೆಸ್ನವರು ಸಿದ್ದರಾಮಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಧರ್ಮ ಹೊಡೆಯಲು ಹೊರಟಿದ್ದರು. ಎಂಬಿ ಪಾಟೀಲ್, ಸಿದ್ದರಾಮಯ್ಯ ಇದರಲ್ಲಿ ನೇರವಾಗಿ ತೊಡಗಿದ್ದರು. ಆದರೆ ಇಂದು ಲಿಂಗಾಯತರ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಶೆಟ್ಟರ್ ಸ್ಥಾನ ಏನು? ಮುಖ್ಯಮಂತ್ರಿ ಮಾಡುತ್ತಾರಾ? ಅಲ್ಲಿ ಮುಖ್ಯಮಂತ್ರಿ ಆಗುವವರೇ ಹೆಚ್ಚಿರುವಾಗ, ಮುಖ್ಯಮಂತ್ರಿ ಆದವರು ಈಗ ಅಲ್ಲಿಗೆ ಹೋಗಿದ್ದಾರೆ. ಅವರಿಗೆ ಅಲ್ಲಿ ಯಾವ ಸ್ಥಾನ ಸಿಗಲಿದೆ ಎಂದು ಪ್ರಶ್ನಿಸಿದರು.
ಶೆಟ್ಟರ್ ವಿರುದ್ಧ ಇಡಿ, ಸಿಬಿಐ ಅಸ್ತ್ರ ಪ್ರಯೋಗದ ಕುರಿತು ಕಾಂಗ್ರೆಸ್ ಆರೋಪಿಸಿದೆ. ಅನಗತ್ಯವಾಗಿ ಇಡಿ ಸಿಬಿಐ ಬಗ್ಗೆ ಆರೋಪ ಮಾಡುತ್ತಿದೆ. ಇವೆಲ್ಲಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಆದರೆ ಚುನಾವಣೆಗಾಗಿ ಈ ರೀತಿ ವಿಚಾರ ಎತ್ತುತ್ತಿದೆ ಎಂದರು.
ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಹಿಂದೆ ಕೈಕಟ್ಟಿ ನಿಲ್ಲುತ್ತಿದ್ದವರ ಎದುರು ಇಂದು ಕಟ್ಟಿಕಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶೆಟ್ಟರ್ ಆರೋಪಿಸಿದ್ದಾರೆ. ಆದರೆ ಶೆಟ್ಟರ್ ನಮ್ಮ ಕೋರ್ ಕಮಿಟಿಯಲ್ಲಿ ಇದ್ದವರು. ಪಕ್ಷದಿಂದ ಹೊರಗೆ ಹೋದ ನಂತರ ಉಸಿರುಗಟ್ಟುವ ವಾತಾವರಣ ಎನ್ನುವುದು ಸರಿಯಲ್ಲ. ಶೆಟ್ಟರ್ ಕೈಕಟ್ಟಿ ನಿಲ್ಲುವ ಸ್ಥಿತಿ ಎಂದೂ ಇರಲಿಲ್ಲ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟೀಕರಣ ನೀಡಿದರು.
ಬಿಜೆಪಿ ಪಕ್ಷದಲ್ಲಿ ಹಿರಿಯರನ್ನ ಕಡೆಗಣಿಸುವ ಪ್ರಶ್ನೆಯ ಇಲ್ಲ: ಬಿಜೆಪಿ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೆ ಇಲ್ಲ. ಜಗದೀಶ್ ಶೆಟ್ಟರ್ ಹೆತ್ತ ತಾಯಿಯನ್ನು ತುಳಿದು ಹೋಗಿದ್ದಾರೆ. ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಪಕ್ಷ ಏನು ಕಡಿಮೆ ಮಾಡಿತ್ತು ಎಂದು ಕಾಂಗ್ರೆಸ್ ಸೇರ್ಪಡೆಯಾದ ಶೆಟ್ಟರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಶಾಸಕ, ಸಚಿವ, ವಿರೋಧ ಪಕ್ಷದ ನಾಯಕ, ಸಿಎಂ ಕೂಡ ಮಾಡಿ ಎಲ್ಲವನ್ನೂ ಕೊಟ್ಟಿತ್ತು. ಬಿಬಿ ಶಿವಪ್ಪ ಅವರ ವಿರೋಧ ಕಟ್ಟಿಕೊಂಡು ಅನಂತ್ ಕುಮಾರ್ ಮತ್ತು ಬಿಎಸ್ವೈ ಅವರ ಬೆನ್ನಿಗೆ ನಿಂತು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರು. ಕಾಂಗ್ರೆಸ್ ಅವರನ್ನು ಮಾಜಿ ಅಧ್ಯಕ್ಷ, ಮಾಜಿ ಸಿಎಂ ಕರೆಯುತ್ತಾರೆ. ಅಂದ್ರೆ ಅದಕ್ಕೆ ಬಿಜೆಪಿ ಕಾರಣ ಕಾಂಗ್ರೆಸ್ ಅಲ್ಲ ಎಂದು ಆರೋಪಿಸಿದರು.
ಬಿಎಲ್ ಸಂತೋಷ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಜಗದೀಶ್ ಶೆಟ್ಟರ್ ಆರೋಪ ಮಾಡುವುದನ್ನು ನೋಡಿದರೆ ಅವರು ನಿಜವಾಗಿಯೂ ಬಿಜೆಪಿಗೆ ಬದ್ಧರಾಗಿದ್ದರಾ ಎಂಬ ಅನುಮಾನ ಕಾಡುತ್ತಿದೆ. ಬಿ.ಎಲ್ ಸಂತೋಷ್ ಅವರು ಎಂದೂ ಚುನಾವಣಾ ರಾಜಕೀಯಕ್ಕೆ ಬಂದಿಲ್ಲ. ಅವರು ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ವಿರುದ್ಧ ಮಾತನಾಡಲು ಶೆಟ್ಟರ್ಗೆ ನೈತಿಕತೆ ಇಲ್ಲ ಎಂದರು.
ಏಪ್ರಿಲ್ 30 ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯೋಗಿ ಆದಿತ್ಯನಾಥ್, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಹಲವು ನಾಯಕರು ಏಪ್ರಿಲ್ 30 ರ ಬಳಿಕ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ. ರಾಜ್ಯಾದ್ಯಂತ ಹಲವು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: 'ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ.. ಮಾನಸ ಪುತ್ರನ ಮೇಲಿನ ಪ್ರೇಮಕ್ಕೆ ನನ್ನ ಬಲಿ ಕೊಟ್ಟರು'