ಬೆಂಗಳೂರು: ಅಂತಾರಾಷ್ಟ್ರೀಯ ಪರ್ವತ ದಿನದಂದು ಆರು ಮಹಿಳೆಯರು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲೆಯ ದೊಡ್ಡ ಬೆಟ್ಟವಾದ ಮಧುಗಿರಿ ಬೆಟ್ಟದಲ್ಲಿ ಹೊಸ ರಾಕ್ ಕ್ಲೈಂಬಿಂಗ್ ಮಾರ್ಗ ತೆರೆದಿದ್ದಾರೆ.
3984.5 ಅಡಿ ಎತ್ತರದಲ್ಲಿರುವ ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲೆಯ ಮಧುಗಿರಿ ಬೆಟ್ಟವನ್ನು ಏರಲು ಈ ವಿಶಿಷ್ಟ ಸವಾಲನ್ನು ಕೈಗೆತ್ತಿಕೊಂಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.
ಲಂಬವಾದ ಬಂಡೆಯನ್ನು ಹತ್ತುವ ಸವಾಲು ಕಠಿಣ. ಆರು ಮಹಿಳೆಯರು ಮಾರ್ಗವನ್ನು ತೆರೆಯುವ ಮೂಲಕ ಮತ್ತು ಅದನ್ನು ಏರುವ ಮೂಲಕ ವಿಶಿಷ್ಟ ಕಾರ್ಯವನ್ನು ಸಾಧಿಸಿದ್ದಾರೆ ಎಂದು ತಿಳಿದುಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ತಂಡದ ಪ್ರತಿಯೊಬ್ಬರು ಮತ್ತು ಜನರಲ್ ತಿಮಯ್ಯ ಅಕಾಡೆಮಿ ಆಫ್ ಅಡ್ವೆಂಚರ್ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಶ್ಲಾಘಿಸಿದ್ದಾರೆ.
ನಾವು ಎಲ್ಲಾ ವಯೋಮಾನದ ಗುಂಪುಗಳನ್ನು ಒಟ್ಟುಗೂಡಿಸಿದ್ದೇವೆ. ಅನುಭವಿ ಮತ್ತು ಅನಾನುಭವಿಗಳು ಸಹ ಈ ತಂಡದಲ್ಲಿದ್ದಾರೆ ಎಂದು ಅನುಭವಿ ಅಂತಾರಾಷ್ಟ್ರೀಯ ಅಥ್ಲಿಟ್ ಕ್ಲೈಂಬರ್ 39 ವರ್ಷದ ಇಬ್ಬರ ಮಕ್ಕಳ ತಾಯಿಯೂ ಆಗಿರುವ ಅರ್ಚನಾ ಹೇಳಿದ್ದಾರೆ.
35 ವರ್ಷದ ಇಬ್ಬರ ಮಕ್ಕಳ ತಾಯಿಯಾದ ವತ್ಸಲ, ಏಸ್ ಕ್ಲೈಂಬರ್ 24 ವರ್ಷದ ಚಿಯಾ ಮರಕ್, 15 ವರ್ಷದ ಉದಯೋನ್ಮುಖ ಕ್ರೀಡಾಪಟು ಆರೋಹಿ, ಗದಗ ಮೂಲದ 22 ವರ್ಷದ ಗಂಗಮ್ಮ ಸಂದಿಮಣಿ, ಮೈಸೂರಿನ 22 ವರ್ಷದ ಬಿಂದು, ಶ್ರಿಯಾ ಮಿಶ್ರಾ ಈ ಸಾಹಸಮಯ ಆರೋಹಣದಲ್ಲಿ ಭಾಗಿಯಾಗಿದ್ದಾರೆ.