ಬೆಂಗಳೂರು: ನಗರದಲ್ಲಿ ಬಾಂಗ್ಲಾದೇಶ ಮೂಲದ ಯುವತಿಗೆ ಆಕೆಯ ಸ್ನೇಹಿತರೇ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಗೆ ಪರಿಚಿತರಾದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಇನ್ನೋರ್ವ ಆರೋಪಿ ಹೆಸರು ತಿಳಿದುಬಂದಿಲ್ಲ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದಾರೆ.
ಸಂತ್ರಸ್ತೆ ಮತ್ತು ಬಂಧಿತ ಕೆಲ ಆರೋಪಿಗಳು ಬಾಂಗ್ಲಾದೇಶ ಮೂಲದವರಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ಐ ಕಾಲೋನಿಯಲ್ಲಿ ವಾಸವಾಗಿದ್ದರು. ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗ್ತಿದೆ. ಸಂತ್ರಸ್ತೆ ಮೇಲಿನ ದ್ವೇಷದಿಂದ ಆಕೆಗೆ ಯುವಕರು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ.
ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸೋಂ ಪೊಲೀಸರಿಂದ ವಿಡಿಯೋ ಕುರಿತು ತನಿಖೆ ನಡೆಸಿದಾಗ ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಆ ಬಳಿಕ ಸಂತ್ರಸ್ತೆ ಕುಟುಂಬದ ಸದಸ್ಯರನ್ನ ಪತ್ತೆ ಮಾಡಿದ್ದ ಬಾಂಗ್ಲಾ ಪೊಲೀಸರು, ಕೃತ್ಯವೆಸಗಿದ ಸ್ಥಳ ಆಧರಿಸಿ ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೃತ್ಯವೆಸಗಿ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.