ಬೆಂಗಳೂರು: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಮೊಬೈಲ್ ಯುನಿಟ್ಗಳಲ್ಲಿ ಕೋವಿಡ್ ಪರೀಕ್ಷೆಗೆ ಸಿಬ್ಬಂದಿ ಕೊರತೆ ಉಂಟಾಗಿದ್ದು, ಕೊರೊನಾ ಸೋಂಕು ಪರೀಕ್ಷೆಗೆ ಬರುವವರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ಗಳ ಕೊರತೆಯಾಗಿತ್ತು. ಆರ್ಟಿಪಿಸಿಆರ್ ಪರೀಕ್ಷೆ ಕೊಟ್ಟರೂ ಸಹ ರಿಸಲ್ಟ್ ಬರುವುದು ಮೂರು ನಾಲ್ಕು ದಿನ ತಡವಾಗುತ್ತಿತ್ತು. ಆದರೀಗ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗುವವರ ವರದಿಯನ್ನು ಆಯಾ ದಿನವೇ ಐಸಿಎಂಆರ್ ಪೋರ್ಟಲ್ನಲ್ಲಿ ದಾಖಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಆದೇಶಿಸಿದ್ದಾರೆ. ಈ ಹಿನ್ನೆಲೆ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕು ಪರೀಕ್ಷೆಗೆ ಒಳಗಾಗುವವರ ಮಾಹಿತಿ ಸಂಗ್ರಹ ಹಾಗೂ ಪೋರ್ಟಲ್ನಲ್ಲಿ ಮಾಹಿತಿ ದಾಖಲಿಸುವ ಜವಾಬ್ದಾರಿಗೆ ಪ್ರತ್ಯೇಕ ಸಿಬ್ಬಂದಿ ಸಹ ಇಲ್ಲದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.
ಒಂದಷ್ಟು ಜನರ ಮಾಹಿತಿ ಸಂಗ್ರಹಿಸಿ, ಮೊಬೈಲ್ನಲ್ಲಿ ದಾಖಲಿಸಿ ಒಟಿಪಿ ಪಡೆದ ಬಳಿಕ ಪರೀಕ್ಷೆ ನಡೆಸಿ ಕಳಿಸಲಾಗುತ್ತದೆ. ಆದರೆ ಆ ಮಾಹಿತಿಯನ್ನು ಬಳಿಕ ಸಿಸ್ಟಂನಲ್ಲಿ ಐಸಿಎಂಆರ್ ಪೋರ್ಟಲ್ಗೆ ಅಪ್ಲೋಡ್ ಮಾಡಲು ಗಂಟೆಗಟ್ಟಲೆ ಎದ್ದು ಹೋಗುತ್ತಾರೆ. ಇದರಿಂದ ಕೋವಿಡ್ ಪರೀಕ್ಷೆಗಾಗಿ ಬಂದವರು ಕಾಯಬೇಕಾದ ಸ್ಥಿತಿ ಇದ್ದು, ಎಷ್ಟೋ ಜನ ಪರೀಕ್ಷೆ ಮಾಡಿಸಿಕೊಳ್ಳದೇ ವಾಪಸ್ ಹೋಗುವಂತಾಗಿದೆ.
ಮಧ್ಯಾಹ್ನದವರೆಗೂ ಸೋಂಕು ಪರೀಕ್ಷೆಗೆ ಒಳಗಾಗುವವರ ಮಾಹಿತಿಯನ್ನು ಪೋರ್ಟಲ್ನಲ್ಲಿ ದಾಖಲಿಸಲು ಆರೋಗ್ಯ ಕೇಂದ್ರದ ಸಿಬ್ಬಂದಿ ಸಮಯ ತೆಗೆದುಕೊಳ್ಳುತ್ತಿದ್ದು, ಸೋಂಕು ಪರೀಕ್ಷೆಗೆ ಬಂದವರು ಕ್ಯೂ ನಿಂತೇ ಕಾಯಬೇಕಾದ ಸ್ಥಿತಿ ಬಂದಿದೆ. ಮೊದಲೇ ಅನಾರೋಗ್ಯದ ಲಕ್ಷಣದಿಂದ ಬಳಲುತ್ತಿರುವವರು, ವಯೋವೃದ್ಧರು ತಾಸುಗಟ್ಟಲೆ ಸಾಲಿನಲ್ಲಿ ನಿಲ್ಲಲು ಹರಸಾಹಸ ಪಡುತ್ತಿದ್ದಾರೆ.
ಪೋರ್ಟಲ್ನಲ್ಲಿ ಮಾಹಿತಿ ದಾಖಲಿಸಿದರೆ ಮಾತ್ರ ಬೇಗ ಕೊರೊನಾ ಪರೀಕ್ಷಾ ವರದಿ ಬರುತ್ತದೆ. ಇಲ್ಲವಾದರೆ ವಿಳಂಬವಾಗಲಿದೆ. ಇಲ್ಲಿ ಕ್ಯೂ ಹೆಚ್ಚಿರುವುದರಿಂದ ಬೇರೆ ಕೇಂದ್ರಗಳಿಗೆ ಹೋಗಿ ಎಂದು ಹೇಳುತ್ತಿರುವ ಘಟನೆ ಮಂಜುನಾಥ ನಗರ ಮೊದಲಾದ ಪ್ರಾಥಮಿಕ ಕೇಂದ್ರಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
ಇನ್ನೊಂದೆಡೆ ಎರಡನೇ ಅಲೆಯ ಕೋವಿಡ್ ತೀವ್ರತೆ ಹೆಚ್ಚಿರುವ ಕಾರಣ ಅನೇಕ ಸಿಬ್ಬಂದಿ ಕೆಲಸ ತೊರೆದು ಊರುಗಳಿಗೆ ಹೋಗಿದ್ದಾರೆ. ಅಲ್ಲದೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಮನೆಗಳಿಗೆ ಹೋಗಿ ಟೆಸ್ಟ್ ಮಾಡುವ ಪದ್ಧತಿಯನ್ನು ಕೂಡ ಬಿಬಿಎಂಪಿ ಸಕಾಲಕ್ಕೆ ನಡೆಸುತ್ತಿಲ್ಲ. ನಾಲ್ಕಕ್ಕಿಂತ ಹೆಚ್ಚು ಜನ ಪ್ರಾಥಮಿಕ ಸಂಪರ್ಕಿತರಿದ್ದರೆ ಮಾತ್ರ ಮನೆಗಳಿಗೆ ಟೆಸ್ಟ್ಗೆ ಹೋಗುತ್ತಿದ್ದು, ಒಬ್ಬರು, ಇಬ್ಬರಿರುವ ಮನೆಗಳಲ್ಲಿ ಅವರೇ ಪ್ರಾಥಮಿಕ ಕೇಂದ್ರಕ್ಕೆ ಬಂದು ಟೆಸ್ಟ್ ಮಾಡಿಸಿಕೊಳ್ಳಬೇಕಿದೆ. ಒಟ್ಟಿನಲ್ಲಿ ಸಿಬ್ಬಂದಿ ಕೊರತೆ ಹಾಗೂ ಹೆಚ್ಚುವರಿ ಕೆಲಸಗಳು ಬರುತ್ತಿರುವ ಹಿನ್ನೆಲೆ ಕೋವಿಡ್ ಟೆಸ್ಟಿಂಗ್ ವಿಳಂಬವಾಗುತ್ತಿದೆ.