ಬೆಂಗಳೂರು: ಅವರಿಬ್ಬರಿಗೂ ಮದುವೆ ಆಗಿ ಆದಾಗಲೇ ಐದು ವರ್ಷ ಕಳೆದಿತ್ತು. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ, ಹೆಂಡತಿಗೆ ಮಾತ್ರ ಹಳೆ ಪ್ರಿಯಕರ ಆಗಾಗ ಕಾಲ್ ಮಾಡುತ್ತಿದ್ದ. ಇವರಿಬ್ಬರ ಸ್ನೇಹಕ್ಕೆ ಗಂಡ ಅಡ್ಡ ಬರುತ್ತಿದ್ದ ಎಂಬ ಕಾರಣಕ್ಕೆ ಆತ ಗೆಳತಿಯ ಗಂಡನ ಕೊಲೆ ಮಾಡಿರುವ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಸಂಬಂಧ ಏಳು ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಜೋಹೇಬ್ ಅಬ್ರಾಹಂ ಕೊಲೆಯಾದ ವ್ಯಕ್ತಿ. ಈತನ ಪೋಷಕರು ದೂರು ನೀಡಿದ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇನ್‌ಸ್ಪೆಕ್ಟರ್ ಮನೋಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ನದೀಂ ಪಾಷಾ, ತನ್ವೀರ್ ಮುಬಾರಕ್, ಮೊಹಮ್ಮದ್ ತಬ್ರೇಜ್ ಸೇರಿ ಏಳು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಶಬ್ರೀನ್ ಎಂಬಾಕೆಯನ್ನು ಅಬ್ರಹಾಂ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಈತನ ಮಾವ ಅಬ್ರಹಾಂಗೆ ಒಂದು ಚಿಲ್ಲರೆ ಅಂಗಡಿ ಹಾಕಿಕೊಟ್ಟು ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದರು. ಅದಾಗಿಯೂ ಶಬ್ರೀನ್ ಕಾಲೇಜು ದಿನಗಳಿಂದ ಪರಿಚಿತನಾಗಿದ್ದ ಆರೋಪಿ ನದೀಂ ಜೊತೆಗೆ ಸ್ನೇಹ ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ಪತ್ನಿ-ಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗ್ತಿದೆ.
ಅಪಹರಿಸಿ ಕೊಲೆ: ಶಬ್ರೀನ್ ಮತ್ತು ತನ್ನ ನಡುವೆ ಅಬ್ರಾಹಂ ಅಡ್ಡ ಬರುತ್ತಿದ್ದಾನೆ ಎಂದು ತಿಳಿದಿದ್ದ ನದೀಂ ಏ.30ರಂದು ಚಂದ್ರಾ ಲೇಔಟ್ ನಿವಾಸದ ಬಳಿಯಿಂದ ಕಾರಿನಲ್ಲಿ ಐದಾರು ಜನರೊಂದಿಗೆ ಸೇರಿಕೊಂಡು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಹಲ್ಲೆ ನಡೆಸಿದ್ದರು. ಅಲ್ಲದೇ, ಅಸ್ತಮಾದಿಂದ ಬಳಲುತ್ತಿದ್ದ ಅಬ್ರಾಹಂನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನಂತರ ಟಾಟಾ ಏಸ್ ವಾಹನದಲ್ಲಿ ಶವ ಹಾಕಿಕೊಂಡು ಗಂಗೊಂಡಹಳ್ಳಿ ರಸ್ತೆಯ ಜಿಮ್ ಮುಂದೆ ತಡರಾತ್ರಿ ಬಿಸಾಡಿ ಹೋಗಿದ್ದರು.
ಇದನ್ನು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಶುರುಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಅಬ್ರಾಹಂ ಶವ ಕಂಡಿದ್ದ ವ್ಯಕ್ತಿಯೊಬ್ಬ ಮನೆಗೆ ಕಾಲ್ ಮಾಡಿ ಮಾಹಿತಿ ನೀಡಿದ್ದ. ಇದರ ಜಾಡು ಹಿಡಿದು ಹೊರಟಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಈ ಕೊಲೆಯ ಹಿಂದೆ ಅಬ್ರಾಹಂ ಹೆಂಡತಿ ಶಬ್ರೀನ್ ಮೇಲೂ ಅನುಮಾನ ಇದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಸರಗಳ್ಳತನ : 'ಇಂಜಿನಿಯರಿಂಗ್' ಪ್ರೇಮಿಗಳ ಬಂಧನ