ಬೆಂಗಳೂರು: ತಾಲೂಕು ಆಡಳಿತ ವತಿಯಿಂದ ಯಲಹಂಕದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸಂತ ಸೇವಾಲಾಲರ 281ನೇ ಜಯಂತಿ ಆಚರಿಸಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ವಿಶ್ವನಾಥ್, ಸಂತ ಸೇವಾಲಾಲರು ಒಬ್ಬ ಆದರ್ಶ ಪುರುಷ. ಮೂರು ಶತಮಾನಗಳ ಹಿಂದೆಯೇ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಅವರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಲಂಬಾಣಿ ಸಮಾಜದ ಸರ್ವತೋಮುಖ ಅಭಿವೃದ್ದಿ ಹಾಗೂ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು 200 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿನ ಬಂಜಾರ ಸಮುದಾಯಕ್ಕೆ ಸಕಲ ಸವಲತ್ತು ಒದಗಿಸಿಕೊಡಲು ಬದ್ದ ಎಂದು ತಿಳಿಸಿದರು.
ಬಳಿಕ ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ಬಂಜಾರ ತೀರ ಕೆಳ ವರ್ಗದ ಸಮುದಾಯ. ಆದರೆ ಇಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾವಂತರಿದ್ದಾರೆ. ಸಂತ ಸೇವಾಲಾಲ್ ಅವರು ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ತತ್ವ ಸಿದ್ದಾಂತಗಳನ್ನು ಸಮುದಾಯದವರು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಬೇಕಿದೆ ಎಂದರು.