ಬೆಂಗಳೂರು: ಇದುವರೆಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದ ರೈತರು ಆದಷ್ಟು ಬೇಗ ಜೋಡಣೆ ಮಾಡಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಮನವಿ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ ಮಾರ್ಗಸೂಚಿಯಂತೆ ವಿದ್ಯುನ್ಮಾನವಾಗಿ ನೇರವಾಗಿ ರೈತರ ಖಾತೆಗೆ ಆಧಾರ್ ವ್ಯವಸ್ಥೆಯ ಮೂಲಕ ಐದು ಸಾವಿರ ರೂ. ವರ್ಗಾಯಿಸುತ್ತಿದೆ. ಬಹುತೇಕ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ನ್ನು ಅಕೌಂಟ್ ನಂಬರ್ ಗೆ ಲಿಂಕ್ ಮಾಡಿಲ್ಲ. ಹೀಗಾಗಿ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ತಿಳಿಸಿದರು.
ಮೆಕ್ಕೆಜೋಳ ಹಾಗೂ ಹೂವು ಬೆಳೆದ 10 ಲಕ್ಷ ರೈತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ ಐದು ಸಾವಿರದಂತೆ ಪರಿಹಾರ ಧನದ ಮೊದಲ ಕಂತು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಆನ್ಲೈನ್ ಮೂಲಕ ಪರಿಹಾರ ಯೋಜನೆಗೆ ಚಾಲನೆ ನೀಡಲಾಗಿದೆ. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡಿದ ರೈತರಿಗೆ ಪರಿಹಾರ ಹೋಗಿದೆ. ಆದರೆ ಇನ್ನೂ ಕೆಲವು ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಲ್ಲ ಎಂದರು.
ಕೆಲವರು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದಾರೆ. ಹೀಗಾಗಿ ಪರಿಹಾರದ ಹಣ ಅದರ ಬ್ಯಾಂಕ್ ಖಾತೆಗೆ ಹೋಗಿರುವುದು ತಮ್ಮ ಗಮನಕ್ಕೆ ಬಂದಿದೆ. ಅದು ಯಾವುದೇ ಶಾಖೆಗಳನ್ನು ಹೊಂದಿಲ್ಲ. ಹೀಗಾಗಿ ಅದರ ಔಟ್‌ಲೆಟ್‌ಗಳಿಗೆ ಹೋಗಿ ಹಣ ಪಡೆಯಬೇಕಿದೆ. ನಿನ್ನೆ ಹಾವೇರಿಯಲ್ಲಿ 68 ರೈತರ ಹಣ ಏರ್ಟೆಲ್ ಕಂಪನಿಗೆ ಹೋಗಿದೆ. ಈಗ ಹಣ ವಾಪಸ್ ಪಡೆಯಬೇಕೆಂದರೆ ತಹಶೀಲ್ದಾರ್ ಪತ್ರ ಬೇಕು. ನಾವು ನೇರವಾಗಿ ಏರ್ಟೆಲ್ ಕಂಪನಿಗೆ ಆದೇಶ ಕೊಡಲು ಬರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಏರ್ಟೆಲ್ ಕಂಪನಿಗೆ ನೋಟಿಸ್: ಬೇರೆ ಜಿಲ್ಲೆಗಳಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ. ಇದನ್ನು ನಾವು ಪತ್ತೆ ಹಚ್ಚಿದ್ದೇವೆ. ಈ ಬಗ್ಗೆ ಏರ್ಟೆಲ್ ಕಂಪನಿಗೆ ನೋಟಿಸ್ ನೀಡಲಾಗುವುದು. ಈ ಸಂಬಂಧ ಅಧಿಕಾರಿಗಳ ಜೊತೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದೆಂದು ಚರ್ಚಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂದುವರೆದ ನಕಲಿ ಬೀಜ ಮಾರಾಟ ಜಾಲ ಪತ್ತೆ: ವಿಚಕ್ಷಣಾ ದಳದಿಂದ ನಕಲಿ ಬೀಜ ಮಾರಾಟ ಪತ್ತೆ ಮುಂದುವರೆದಿದೆ. ಮೆಕ್ಕೆಜೋಳದಂತೆ ನಕಲಿ ಹತ್ತಿ ಬೀಜ ಮಾರಾಟ ಜಾಲವೂ ಪತ್ತೆಯಾಗಿದೆ. ರಾಯಚೂರಿನ ತುರುವೆಹಾಳದಲ್ಲಿ ಕಳೆದ ಬುಧವಾರ ತೇಜಸ್ ಎನ್ನುವ ಆಂಧ್ರ ಪ್ರದೇಶ ಮೂಲದ ಖಾಸಗಿ ಕಂಪನಿಗೆ ಸೇರಿದ ಮೈ ಸೀಡ್ಸ್ ಹೆಸರಿನ ನೂರು ಕೆಜಿ ಕಳಪೆ ಹತ್ತಿ ಬೀಜ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಈ ಖಾಸಗಿ ಕಂಪನಿಯಿಂದ ಬೀಜ ಕೊಂಡು ಬಿತ್ತಿದ ರೈತರಿಗೆ ಸಸಿ ಬಂದಿಲ್ಲ. ಇದನ್ನು ಗಮನಿಸಿದ ರಾಯಚೂರು ಎಡಿ ಹಾಗೂ ವಿಚಕ್ಷಣಾದಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಶಪಡಿಸಿಕೊಂಡ ಹತ್ತಿ ಬೀಜಗಳನ್ನು ಗುಣಮಟ್ಟ ಪತ್ತೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯಕ್ಕೆ ಮಿಡತೆ ಕಾಟ ಇಲ್ಲ: ರಾಜ್ಯಕ್ಕೆ ಮಿಡತೆ ಕಾಟ ಇಲ್ಲ. ಇವುಗಳಿಂದಾಗಿ ಪ್ರಾರಂಭದಲ್ಲಿ ತುಂಬಾ ಆತಂಕವಾಗಿತ್ತು. ಆದರೆ, ಮಿಡತೆ ಪಾಕಿಸ್ತಾನದ ಕಡೆ ಹೋಗಿವೆ. ರಾಜ್ಯಕ್ಕೆ ಇದರಿಂದ ಯಾವುದೇ ಆತಂಕ ಇಲ್ಲವೆಂದು ಸಚಿವ ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದರು.