ಬೆಳ್ತಂಗಡಿ (ದ.ಕ): ಕೊರೊನಾ ಮಹಾಮಾರಿಯಿಂದ ದಿನದಿಂದ ದಿನಕ್ಕೆ ಜನರು ತತ್ತರಿಸುತ್ತಿದ್ದಾರೆ. ಕೊರೊನಾ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಎರಡನೇ ಸುತ್ತಿನ ಲಾಕ್ಡೌನ್ ಜಾರಿಯಲ್ಲಿದೆ.
ಆದರೆ, ಆಹಾರ ಇಲಾಖೆ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಜನತೆಗೆ ಅವರವರ ಊರುಗಳಲ್ಲಿ ಪಡಿತರ ಅಂಗಡಿಗಳಲ್ಲಿ ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಹೆಸರಲ್ಲಿ ಕೊರೊನಾ ಸೋಂಕನ್ನೂ ಪುಕ್ಕಟೆಯಾಗಿ ಹರಡಲು ವೇದಿಕೆ ಸಿದ್ಧಪಡಿಸುತ್ತಿದೆಯಾ ಎಂಬ ಭಯ ನಾಗರಿಕರನ್ನು ಕಾಡಲಾರಂಭಿಸಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ, ಶಿರ್ಲಾಲ್, ಕುವೆಟ್ಟು ಹಾಗೂ ವಿವಿಧ ಪಡಿತರ ವಿತರಣೆಯ ಅಂಗಡಿಗಳಲ್ಲಿ ಸೇರಿದ ಜನಜಂಗುಳಿಯನ್ನು ಕಂಡರೆ ಆಹಾರ ಇಲಾಖೆ ತಾಲೂಕಿನಲ್ಲಿ ಪಡಿತರ ವಿತರಣೆಯಲ್ಲಿ ಮಾಡಿದ ಎಡವಟ್ಟು ಬಯಲಾಗುತ್ತದೆ. ಲಾಯಿಲ ಪಡಿತರ ಚೀಟಿದಾರರಿಗೆ ತನ್ನ ಪಡಿತರ ಅಂಗಡಿಯಲ್ಲಿ ಬಯೋಮೆಟ್ರಿಕ್ ಮೂಲಕ ಬೆರಳಚ್ಚು ವ್ಯವಸ್ಥೆ ಇಲ್ಲದೇ ಇರುವುದರಿಂದ, ಸುಮಾರು 2 ಕಿಲೋಮೀಟರ್ ದೂರದ ಪೇಟೆಗೆ ಬಂದು ಅಲ್ಲಿ ಬೆರಳಚ್ಚು ಹಾಗೂ ಓಟಿಪಿಗಾಗಿ ಗಂಟೆಗಟ್ಟಲೆ ಕ್ಯೂ ನಿಂತು ಓಟಿಪಿ ಪಡೆದು ಪಡಿತರ ಪಡೆದುಕೊಳ್ಳಬೇಕು.
11 ಗಂಟೆಯಿಂದ ಸಂಪೂರ್ಣ ಲಾಕ್ಡೌನ್ ಇರುವುದರಿಂದ ಬೆಳಗ್ಗೆ ಬೇಗ ಬಂದು ಸರದಿ ಸಾಲಿನಲ್ಲಿ ನಿಂತರೂ ಸರ್ವರ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ. ಇರುವ ಪಡಿತರ ಪಡೆಯಲು ಜನತೆಗೆ ಸಾಕಷ್ಟು ಕಾಲಾವಕಾಶ ನೀಡಿದರೆ, ಯಾರೂ ಪಡಿತರ ಪಡೆಯಲು ಅಂಗಡಿಗಳ ಮುಂದೆ ಈ ರೀತಿಯಾಗಿ ಮುಗಿ ಬೀಳುವುದಿಲ್ಲ.
ಆಹಾರ ಇಲಾಖೆ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಬಡಪಾಯಿಗಳಿಗೆ ಸೀಮಿತ ಅವಧಿ ನೀಡಿ, ಪಡಿತರ ಪಡೆಯಲು ತಾಕೀತು ಮಾಡಿದರೆ, ಹಸಿದ ಹೊಟ್ಟೆಗಳು ನಾಮುಂದು - ತಾಮುಂದು ಎಂದು ಪಡಿತರ ಅಂಗಡಿಗಳ ಎದುರು ಧಾವಿಸುವುದು ಸಾಮಾನ್ಯ. ಪಡಿತರ ಅಂಗಡಿಗಳ ವಠಾರದಲ್ಲಿ ನಿಲ್ಲಲು ಸ್ಥಳವೇ ಇಲ್ಲದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಆಹಾರ ಇಲಾಖೆ ಇನ್ನಾದರೂ ಎಚ್ಚೆತ್ತು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡಪಾಯಿಗಳಿಗೆ ತಿಂಗಳ ಪಡಿತರದೊಂದಿಗೆ ಉಚಿತ ಕೊರೊನಾ ಸೋಂಕು ಹರಡುವ ಯತ್ನವನ್ನು ಕೈಬಿಡಲಿ ಎಂದು ಜನತೆ ಹೇಳುತ್ತಿದ್ದಾರೆ.