ಬೆಂಗಳೂರು: ಅತಿ ಹೆಚ್ಚಿನ ಸಂಚಾರದಟ್ಟಣೆ ಇರುವ ಬೆಂಗಳೂರು ನಗರ ಹಾಗೂ ಬೆಂಗಳೂರು ಸುತ್ತ-ಮುತ್ತಲಿನ ರಸ್ತೆ ಕಾಮಗಾರಿ ಬಗ್ಗೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ಬಗ್ಗೆ ತೀರ್ಮಾನ ಮಾಡಿದ್ದು, ಈ ಬಾರಿ ಅಧಿವೇಶನದಲ್ಲಿ ಸಿಂಗಲ್ ಅಥಾರಿಟಿ ಬಿಲ್ ಚರ್ಚೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರೊಂದಿಗೆ ಬೆಂಗಳೂರಿನ ರಸ್ತೆ ಮತ್ತು ಟ್ರಾಫಿಕ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಬಿಡಿಎ ಹೀಗೆ ಅನೇಕ ಸಂಸ್ಥೆಗಳು ಕಾಮಗಾರಿಗಳನ್ನು ಮಾಡುತ್ತವೆ. ಮಾಸ್ಟರ್ ಪ್ಲಾನ್ ಅಪ್ರೋಚ್‌ನಲ್ಲಿ ಹೋದರೆ ಅನೇಕ ಸಮಸ್ಯೆಗಳು ಬಗೆಹರಿಸಬಹದು. ಇದರಿಂದ ಬೆಂಗಳೂರಿನ ಸುತ್ತಮುತ್ತಲಿನ ಟ್ರಾಫಿಕ್ ಕಡಿಮೆ ಮಾಡಲು ಅನುಕೂಲವಾಗಲಿದೆ ಎಂದರು.
ಅಲ್ಲದೇ, ಮಲ್ಟಿ ಪರ್ಪಸ್ ಯೋಜನೆಗೆ ಚಿಂತನೆ ನಡೆಸಿದ್ದೇವೆ. ಒಂದೇ ಫ್ಲೈಓವರ್ ಪಿಲ್ಲರ್‌ನ ಅಡಿಯಲ್ಲಿ ಮೆಟ್ರೋ, ರೈಲು ಮತ್ತು ರಸ್ತೆಯನ್ನು ಮಾಡಬೇಕು ಎಂಬ ಪ್ಲಾನ್ ಇದೆ. ಬೈಯಪ್ಪನಹಳ್ಳಿಯಲ್ಲಿ ಈ ರೀತಿ ಮಾಡಲು ರೈಲ್ವೆ ಇಲಾಖೆ ಯೋಜನೆ ತಯಾರಿಸುತ್ತಿದೆ. ಭೂಮಿಯ ಬಳಕೆ ಕಡಿಮೆ ಮಾಡಿಕೊಂಡು ಒಂದೇ ಜಾಗವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಮೂರು ಫ್ಲೋರ್‌ಗಳಾಗಿ ಮಾಡಿಕೊಂಡು ಅದರ ಅಡಿಯಲ್ಲಿ ಸಾರಿಗೆ ಸಂಪರ್ಕ ಸಾಧಿಸಲು ಚಿಂತನೆಯಾಗಿದೆ. ಈ ಬಗ್ಗೆ ಟೆಕ್ನಿಕಲ್ ತಂಡದ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಎಲಿವೇಟೆಡ್ ಟ್ರಾನ್ಸ್‌ಪೋರ್ಟ್ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲೆಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲವೋ, ಅಲ್ಲೆಲ್ಲ ಎಲಿವೇಟೆಡ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಮಾಡಲಾಗುತ್ತದೆ. ರೋಪ್ ವೇ ಮೂಲಕ ಸಂಚಾರಿಸುವ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಅದರ ತಂತ್ರಜ್ಞಾನ ಇದೆ. ಅದನ್ನು ಬೆಂಗಳೂರಿಗೆ ಯಾವ ರೀತಿ ಬಳಸಿಕೊಳ್ಳಬಹುದು ಎಂದು ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳನ್ನು ಕೂಡಿಸುವ ಬೇಡಿಕೆಗೆ ಕೇಂದ್ರ ಸಚಿವ ಗಡ್ಕರಿ ಒಪ್ಪಿಕೊಂಡಿದ್ದಾರೆ. ಅಗತ್ಯವಿರುವ ಕಡೆ ರಿಂಗ್‌ರೋಡ್‌ಗಳನ್ನು ಮಾಡಲು ಚಿಂತನೆ ನಡೆಸಿದ್ದೇವೆ. ವಿನೂತನವಾಗಿ ತಂತ್ರಜ್ಞಾನ ಬಳಸಿಕೊಂಡು ಟ್ರಾಫಿಕ್ ಕಡಿಮೆ ಮಾಡಲು ಕ್ರಮ ವಹಿಸಲಾಗುತ್ತದೆ. ಶಿರಾಡಿಘಾಟ್ ಸೇರಿದಂತೆ ಅನೇಕ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದೆ. ಹೊಸ ಹೆದ್ದಾರಿ ಘೋಷಣೆಗಳ ಬಗ್ಗೆ ಸಕಾರಾತ್ಮಕ ಚರ್ಚೆಯಾಗಿದೆ. ನಾಳೆ ಮತ್ತೊಮ್ಮೆ ಈ ವಿಚಾರಗಳ ಬಗ್ಗೆ ಸಭೆ ನಡೆಸಲಾಗುವುದು ಎಂದರು.
ಬೆಂಗಳೂರು ಮತ್ತು ಮೈಸೂರು ರಸ್ತೆ ಕಾಮಗಾರಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅದನ್ನು ಕೂಡಲೇ ಸರಿಪಡಿಸುವ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಹೆದ್ದಾರಿ ಉದ್ಘಾಟನೆಗೆ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಅಲ್ಲಿ ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಭೂ ಒತ್ತುವರಿ ಸಮಸ್ಯೆ ಇದೆ. ಅದೆಲ್ಲ ಪೂರ್ಣವಾದ ನಂತರ ಉದ್ಘಾಟನೆಯ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಕಳಪೆ ಕಾಮಗಾರಿ ಆರೋಪ: ಗಡ್ಕರಿ ಜೊತೆ ಸಿಎಂ ಚರ್ಚೆ