ಬೆಂಗಳೂರು: ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರ ನಿಧನಕ್ಕೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಹಾಗೂ ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಸಚಿವರು ಹಾಗೂ ಬಿಜೆಪಿ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಮಹದೇವ ಪ್ರಕಾಶ್ ಅವರ ನಿಧನಕ್ಕೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಉತ್ತಮ ವಾಗ್ಮಿಗಳಾಗಿದ್ದ ಮಹದೇವ ಪ್ರಕಾಶ್ ಅವರು “ಈ ಭಾನುವಾರ” ಪತ್ರಿಕೆಯ ಸಂಪಾದಕರಾಗಿ, ಜನಾನುರಾಗಿಗಳಾಗಿದ್ದರು. ತಮ್ಮ ಪತ್ರಿಕೆಯಲ್ಲಿ ಕರ್ನಾಟಕ ರಾಜಕೀಯ ಬೆಳವಣಿಗೆಗಳ ಕುರಿತು ವಿಶ್ಲೇಷಣ ಮಾಡುತ್ತಿದ್ದು, ಮಾಧ್ಯಮ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೇರನುಡಿಗಳಲಿ ತಮ್ಮಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು ಎಂದು ಹೇಳಿದ್ದಾರೆ.
ಶ್ರೀಯುತರ ಅಗಲಿಕೆಯಿಂದಾದ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ನೀಡಲಿ ಎಂದು ಸಭಾಧ್ಯಕ್ಷರು ಪ್ರಾರ್ಥಿಸಿದ್ದಾರೆ.
ಶಶಿಕಲಾ ಜೊಲ್ಲೆ ಸಂತಾಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಸಂತಾಪ ಸಂದೇಶದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಮಹಾದೇವ ಪ್ರಕಾಶ್ ಅವರ ನಿಧನದಿಂದ ಅತೀವ ಬೇಸರವಾಗಿದೆ. ರಾಜಕೀಯ ವಿಶ್ಲೇಷಕರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಶ್ರೀಯುತರು, ತಮ್ಮ ನೇರ ನುಡಿ ಹಾಗೂ ದಿಟ್ಟ ಪ್ರತಿಪಾದನೆಗಳಿಂದ ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿದರು.
ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೆ ನೆರವಾಗಿ ತಮ್ಮ ವಿಷಯ ಮಂಡಿಸುತ್ತಿದ್ದರು. ಅನೇಕ ಯುವ ಪತ್ರಕರ್ತರಿಗೆ ರಾಜಕೀಯ ವರದಿಗಾರಿಗೆ ಬಗ್ಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದ ಅವರು, ಪತ್ರಿಕಾ ವಲಯದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇಂತಹ ಅದ್ಭುತ ರಾಜಕೀಯ ವಿಶ್ಲೇಷಕ, ಹಾಗೂ ಓರ್ವ ತೀಕ್ಷ್ಣ ಪತ್ರಕರ್ತರನ್ನು ಕಳೆದುಕೊಂಡು ಪತ್ರಿಕಾ ಲೋಕ ತಬ್ಬಲಿಯಾದಂತಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಶ್ರೀಯುತರ ಅಗಲಿಕೆಯ ನೋವನ್ನು ಭರಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಸಂತಾಪಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ಸಂತಾಪ ಸೂಚಿಸಿದ್ದು, ಹಿರಿಯ ಪತ್ರಕರ್ತರಾಗಿದ್ದ , ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ಮಹದೇವ ಪ್ರಕಾಶ್ ಅವರ ನಿಧನ ಆಘಾತ ತಂದಿದೆ. ಅವರು ನೇರ ನಡೆನುಡಿಯಿಂದ ಖ್ಯಾತರಾಗಿದ್ದರು. ರಾಜಕೀಯ ವಿಶ್ಲೇಷಣೆಯಲ್ಲಿ ನೈಪುಣ್ಯತೆ ಹೊಂದಿದ್ದರು. ತಮಗೆ ಆತ್ಮೀಯರಾಗಿದ್ದರು. ಅವರ ಅಕಾಲಿಕ ನಿಧನ ರಾಜ್ಯಕ್ಕೆ ಭರಿಸಲಾರದ ನಷ್ಟಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಸಚಿವ ಶೆಟ್ಟರ್ ಸಂತಾಪಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ತಮ್ಮ ಸಂತಾಪ ಸಂದೇಶದಲ್ಲಿ, ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಅವರ ನಿಧನ ಬೇಸರ ತಂದಿದೆ. ಪತ್ರಕರ್ತರಾಗಿ ಅದರಲ್ಲೂ ರಾಜಕೀಯ ವಿಶ್ಲೇಷಕರಾಗಿ ಪತ್ರಿಕಾ ರಂಗಕ್ಕೆ ವಿಶಿಷ್ಟ ಅವರ ನೀಡಿದ್ದ ಕೊಡುಗೆಯನ್ನು ಅವರು ನೆನೆಪಿಸಿಕೊಂಡಿದ್ದಾರೆ. ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ವರ್ಗದವರಿಗೆ ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.