ಬೆಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪಕ್ಕೆ ಸಿಲುಕಿರುವ ಅಮೂಲ್ಯಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ವಹಿಸಬೇಕು ಎಂದು ಕೋರಿ ವಕಿಲರೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮಂಡ್ಯ ಮೂಲದ ವಕೀಲರಾದ ವಿಶಾಲ ರಘು ಎಂಬುವರು ಪ್ರಕರಣದ ತನಿಖೆಯನ್ನು ಎನ್ಐಗೆ ವಹಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ದಾಖಲಿಸಿದ್ದಾರೆ. ಅರ್ಜಿಯಲ್ಲಿ, ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ ನಂತರ ಪ್ರಕರಣ ದಾಖಲಿಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು ಮತ್ತು ತನಿಖಾಧಿಕಾರಿ ನಿಗದಿತ ಅವಧಿಯಲ್ಲಿ ತನಿಖಾ ವರದಿ ಮತ್ತು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದರಿಂದಾಗಿಯೇ ಕಾನೂನು ಅವಕಾಶ ಬಳಸಿಕೊಂಡು ಗುರುತರ ಆರೋಪ ಎಸಗಿರುವ ಅಮೂಲ್ಯ ಜಾಮೀನು ಪಡೆದುಕೊಂಡಿದ್ದಾರೆ.
ತನಿಖಾಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಾಕ್ಷಿಗಳಿದ್ದರೂ ಸಹ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ತನಿಖಾಧಿಕಾರಿಯನ್ನು ಅಮಾನತು ಮಾಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಅಮೂಲ್ಯ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಅಮೂಲ್ಯ ಭಯೋತ್ಪಾದಕರ ಸಂಪರ್ಕ ಹೊಂದಿರುವ ಸಾಧ್ಯತೆ ಇದ್ದು, ಈ ಕುರಿತು ತನಿಖೆ ನಡೆಸಲು ಸೂಕ್ತ ತನಿಖಾ ಸಂಸ್ಥೆಯಾದ ಎನ್ಐಎಗೆ ವಹಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಅರ್ಜಿಯಲ್ಲಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಡಿಜಿಐಜಿ, ನಗರ ಪೊಲೀಸ್ ಆಯುಕ್ತ, ಚಿಕ್ಕಪೇಟೆ ಎಸಿಪಿ, ಉಪ್ಪಾರಪೇಟೆ ಇನ್ಸ್‌ಪೆಕ್ಟರ್. ಎನ್ಐಎ ಹಾಗು ಆರೋಪಿ ಅಮೂಲ್ಯ ಲಿಯೋನಾಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನೂ ವಿಚಾರಣೆಗೆ ನಿಗದಿಯಾಗಬೇಕಿದೆ.