ಬೆಂಗಳೂರು: ಕುಟುಂಬ ಪಿಂಚಣಿಯಂತ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಎರಡನೇ ಪತ್ನಿಯ ಸಂಬಂಧವನ್ನು ಗುರುತಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕ. ಈ ಪ್ರಕ್ರಿಯೆ ಸರ್ಕಾರಿ ಉದ್ಯೋಗಿಗಳಿಗೆ ಎರಡನೇ ಮದುವೆಗೆ ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಪಡೆಯುವ ಅಧಿಕಾರ ಹೊಂದಿದೆ ಎಂದು ತಿಳಿಸಿದೆ.
ಪತಿಯ ಕುಟುಂಬ ಪಿಂಚಣಿ ನೀಡಲು ನಿರಾಕರಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ, ಮೊದಲನೇ ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕಿಲ್ಲ ಎಂದು ತಿಳಿಸಿದೆ. ಕೌಟುಂಬಿಕ ಪಿಂಚಣಿಯನ್ನು ನಿಯಮದ ಪ್ರಕಾರ ಪತ್ನಿಗೆ ನೀಡಲಾಗುವುದು. ಆದರೆ ಎರಡನೇ ಪತ್ನಿಯ ಮದುವೆ ಕಾನೂನಿನ ಕಣ್ಣಲ್ಲಿ ಮದುವೆಯೇ ಅಲ್ಲ. ಹಾಗಾಗಿ ಹಿಂದೂ ವಿವಾಹ ಕಾಯಿದೆ 1955ರ ಪ್ರಕಾರ ದ್ವಿಪತ್ನಿತ್ವ ಅಪರಾಧವಾಗುತ್ತದೆ ಎಂದಿರುವ ವಿಭಾಗೀಯಪೀಠ, ಏಕ ಸದಸ್ಯಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿ, ಅರ್ಜಿದಾರರು ಕಾನೂನು ಬದ್ಧವಾಗಿ ಮದುವೆಯಾದ ಪತ್ನಿಯಲ್ಲ, ಹಾಗಾಗಿ ಪಿಂಚಣಿ ನೀಡಲಾಗದು ಎಂದು ಆದೇಶ ನೀಡಿದೆ.
ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಚಾಲ್ತಿಯಲ್ಲಿದೆ. ಮೊದಲನೇ ಪತ್ನಿ ಜೀವಂತವಾಗಿರಬೇಕಾದರೆ ಎರಡನೇ ಮದುವೆಗೆ ಅವಕಾಶವೇ ಇಲ್ಲ. ಹಾಗಾಗಿ ಅರ್ಜಿದಾರರು ಏನೇ ವಾದ ಮಾಡಿದರೂ ಅದಕ್ಕೆ ಯಾವುದೇ ಕಾಯಿದೆಯ ಬೆಂಬಲ ಇರುವುದಿಲ್ಲ. ಅವರಿಗೆ ಪಿಂಚಣಿಯ ಅರ್ಹತೆ ಇರುವುದಿಲ್ಲ. ಹಾಗಾಗಿ ಮೃತ ಸರ್ಕಾರಿ ನೌಕರರ ಜತೆಗೆ ಅರ್ಜಿದಾರರ ನಡುವೆ ಏರ್ಪಟ್ಟಿರುವ ಎರಡನೇ ಮದುವೆಗೆ ಕಾನೂನು ಬಾಹಿರವಾಗಿದ್ದು, ಅದಕ್ಕೆ ಯಾವುದೇ ಸಿಂಧುತ್ವವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 17ರ ಪ್ರಕಾರ ದ್ವಿಪತ್ನಿತ್ವ ಅಪರಾಧವಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ ಸರ್ಕಾರಿ ನೌಕರ ಕುಟುಂಬ ಅಂದರೆ ಕಾನೂನು ಬದ್ಧವಾಗಿ ವಿವಾಹವಾಗಿರುವ ಪತ್ನಿಗೆ ಕುಟುಂಬ ಪಿಂಚಣಿ ನೀಡಲಾಗುವುದು. ಕಾನೂನಿನಲ್ಲಿ ಎರಡನೇ ಮದುವೆಗೆ ಮಾನ್ಯತೆ ಇಲ್ಲದಿರುವ ಕಾರಣ ಪಿಂಚಣಿಗೂ ಅರ್ಹರಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ ಏನು?: ನಂಜುಂಡಪ್ಪ ಎಂಬುವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮೊದಲನೇ ಪತ್ನಿಗೆ ನಿಯಮದಂತೆ ಕೌಟುಂಬಿಕ ಪಿಂಚಣಿ ನೀಡಲಾಗುತ್ತಿತ್ತು. ಆದರೆ ಎರಡನೇ ಪತ್ನಿ ಅರ್ಜಿ ಸಲ್ಲಿಸಿ ತಾವು ಎರಡನೇ ಪತ್ನಿಯಾಗಿದ್ದರೂ ಕೌಟುಂಬಿಕ ಪಿಂಚಣಿ ಅರ್ಹರಾಗಿದ್ದು, ತಮಗೆ ಪಿಂಚಣಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಆದರೆ ಇಲಾಖೆ ಅವರ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಏಕಸದಸ್ಯಪೀಠವೂ ಸಹ ಆರ್‌ಡಿಪಿಆರ್ ಕ್ರಮವನ್ನು ಎತ್ತಿಹಿಡಿದು, ಪಿಂಚಣಿ ನೀಡಲು ಸಾಧ್ಯವಿಲ್ಲವೆಂದು ಆದೇಶಿಸಿತ್ತು. ಹಾಗಾಗಿ ಅರ್ಜಿದಾರರು ವಿಭಾಗೀಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಸಿವಿಲ್ ವ್ಯಾಜ್ಯಗಳ ಸೆಟಲ್ಮೆಂಟ್ ಕೇಂದ್ರಗಳಾಗುತ್ತಿರುವ ಪೊಲೀಸ್ ಠಾಣೆಗಳು: ಹೈಕೋರ್ಟ್ ಗರಂ