ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸಾಧ್ಯವಾಗದೇ ರಾಜ್ಯ ಸರ್ಕಾರ ಮತ್ತೊಮ್ಮೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿದೆ. ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದ ವಾಹನ ಮಾಲೀಕರು ಈಗಾಗಲೇ ಪಡುವ ಕಷ್ಟದ ಜತೆ ಇನ್ನಷ್ಟು ಸೇರಿಕೊಂಡು ದಯನೀಯ ಸ್ಥಿತಿಯತ್ತ ತಲುಪಿದ್ದಾರೆ.
ಶೇ.80ರಷ್ಟು ಪ್ರವಾಸಿ ವಾಹನಗಳೇ ಕಣ್ಮರೆಯಾಗಿರುವ ಈ ಸಂದರ್ಭದಲ್ಲಿ ಇರುವ ಶೇ.20ರಷ್ಟು ವಾಹನಗಳ ಚಾಲಕರು, ಮಾಲೀಕರು ಬದುಕಿಗಾಗಿ ಬೇರೆ ಯಾವ ಮಾರ್ಗವಿದೆ ಎಂದು ಹುಡುಕುವ ಸ್ಥಿತಿ ಎದುರಾಗಿದೆ. ಕೋವಿಡ್ ಮೊದಲ ಅಲೆಯ ಲಾಕ್ಡೌನ್ಲ್ಲಿಯೇ ಬೋರಲು ಮಲಗಿದ್ದ ಪ್ರವಾಸೋದ್ಯಮ ವಾಹನ ಚಾಲಕರ, ಮಾಲೀಕರ ಬದುಕು ಈ ಎರಡನೇ ಅಲೆಯ ಲಾಕ್ಡೌನ್ನಿಂದಾಗಿ ಮೇಲೇಳಲಾಗದಷ್ಟು ನೆಲಕಚ್ಚುವ ಸ್ಥಿತಿ ತಲುಪಲಿದೆ. ಇದರ ಬೆನ್ನಲ್ಲೇ ಮೂರನೇ ಅಲೆ ಬರಲಿದೆ ಎಂಬ ಮಾತು ಇವರ ಪಾಲಿಗೆ ಬರಸಿಡಿಲಿನಂತೆ ಬಡಿದಿದೆ.
ಸರ್ಕಾರ ತಾವು ಏನೇ ಸಿದ್ಧತೆ ನಡೆಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರೂ, ಯಾವುದೇ ರೀತಿ ಅದು ಆಚರಣೆಗೆ ಬಾರದೇ ವಾಹನ ಚಾಲನೆಯನ್ನೇ, ಅದರಿಂದ ಬರುವ ಆದಾಯವನ್ನೇ ಅವಲಂಬಿಸಿದ್ದವರ ಪಾಡು ಹೇಳತೀರದಾಗಿದೆ. ಅತಿಹೆಚ್ಚು ಹಾನಿರಾಜ್ಯದಲ್ಲಿ ಬಾಡಿಗೆ ವಾಹನ ಕ್ಷೇತ್ರಕ್ಕೆ ಆರ್ಥಿಕ ಹಾಗೂ ಜೀವಹಾನಿ ಮೂಲಕ ಅತಿಹೆಚ್ಚು ದೊಡ್ಡ ಮಟ್ಟದ ನಷ್ಟ ಆಗುತ್ತಿದೆ. ನಮ್ಮವರೆಲ್ಲಾ ಸದಾ ಜನರ ಜತೆ ಬೆರೆತೇ ಇರುತ್ತೇವೆ. ರೋಗ ಬಹುಬೇಗ ಆವರಿಸುತ್ತದೆ. ದುರಂತ ಅಂದರೆ ಆಸ್ಪತ್ರೆಗೆ ದಾಖಲಾದ ಶೇ.75ರಷ್ಟು ಮಂದಿ ಜೀವಂತವಾಗಿ ವಾಪಸ್ ಬರುತ್ತಿಲ್ಲ ಎನ್ನುವ ಕೊರಗು ದೊಡ್ಡದಾಗಿದೆ. ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಸಮರ್ಪಕ ಸಮಯಕ್ಕೆ ಅಗತ್ಯವಿರುವ ಔಷಧ ಸಿಗುತ್ತಿಲ್ಲ. ದಿನಕ್ಕೊಬ್ಬ ಟ್ರಾವೆಲ್ ಏಜೆಂಟ್ ನಿಧನರಾಗುತ್ತಿದ್ದಾರೆ. ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಳ್ಳುತ್ತಿದ್ದಾರೆ. ಸಾವುನೋವು ಸಂಖ್ಯೆ ಬಹಳ ಇದೆ. ನೈಜ ಸಂಖ್ಯೆ ಸಿಗುತ್ತಿಲ್ಲ. ಸೂಕ್ತ ಚಿಕಿತ್ಸೆ ಸಿಗದೇ ಬೇರೆ ಕಾರಣಕ್ಕೆ ಸಾವನ್ನಪ್ಪುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಒಟ್ಟಾರೆ ಪ್ರವಾಸೋದ್ಯಮ, ಬಾಡಿಗೆ ಹಾಗೂ ಜನರನ್ನು ಅವಲಂಬಿಸಿದ್ದ ಬಾಡಿಗೆ ವಾಹನ ಕ್ಷೇತ್ರ ಬಡವಾಗಿದೆ.
ಪ್ರವಾಸೋದ್ಯಮ ಅವಲಂಬಿಸಿರುವ ಪ್ರವಾಸಿ ವಾಹನ ಕ್ಷೇತ್ರ ದೊಡ್ಡ ಹಿನ್ನಡೆ ಅನುಭವಿಸಿದೆ. 14 ತಿಂಗಳಿಂದ ಯಾವುದೇ ಅಂತಾರಾಷ್ಟ್ರೀಯ ವಿಮಾನ ಹಾರಾಡಿಲ್ಲ. ಮನೆಯಿಂದಲೇ ಕೆಲಸ ಮಾಡುವ ಕಾರ್ಯ ಆರಂಭವಾಗಿ 16 ತಿಂಗಳಾಯಿತು. ಐಪಿಎಲ್ ನಡೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಸಕಾಲಕ್ಕೆ ವ್ಯಾಕ್ಸಿನೇಷನ್ ಸಿಗುತ್ತಿಲ್ಲ. ರೋಗ ಸಮುದಾಯ ಹಂತ ತಲುಪಿದ್ದರಿಂದ ಪಾರ್ಟೀಷನ್ ಹಾಕಿ ಗಾಡಿ ಕಳಿಸಲು ಹೆದರಿಗೆ ಆಗುತ್ತಿದೆ. ಸರ್ಕಾರ ಸಹ ಕಣ್ಮುಚ್ಚಿ ಕುಳಿತಿದೆ. ಎರಡನೇ ಅಲೆ ಆರಂಭವಾದ ಎರಡು ತಿಂಗಳ ಬಳಿಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್ ಆರಂಭದಿಂದಲೇ ಎರಡನೇ ಅಲೆ ವ್ಯಾಪಿಸುತ್ತಿದೆ. ಮರಟೋರಿಯಂ ಮಾಡಿಲ್ಲ. ರಸ್ತೆ ತೆರಿಗೆ ತೆಗೆದುಹಾಕಬೇಕಿತ್ತು. ಕಳೆದ ಒಂದು ವರ್ಷದಿಂದ ಕೊರೊನಾ ಅಟ್ಟಹಾಸ ಇರುವುದರಿಂದ ನಮ್ಮ ಕೈಗಾರಿಕೆಯ ಜಿಎಸ್ಟಿ ತೆಗೆದುಹಾಕುವಂತೆ ಕೇಳಿಕೊಂಡಿದ್ದೆವು. ಆದರೆ ಅದೂ ಈಡೇರಿಲ್ಲ. ಕನಿಷ್ಠ 5 ರಿಂದ 12 ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಎರಡು ವರ್ಷ ತೆರಿಗೆ ವಿನಾಯಿತಿ ಕೇಳಿದರೆ ಅದನ್ನು ಮಾಡಿಲ್ಲ ಎಂಬುದು ಹಲವರ ಅಳಲು.
ಪ್ರವಾಸಿ ವಾಹನ ಮಾಲೀಕರ ಗೋಳನ್ನು ಕೇಳಿದರೆ ನಿಜಕ್ಕೂ ಬೇಸರ ಅನ್ನಿಸುತ್ತದೆ. ಇವರಲ್ಲಿ ಶೇ.30ರಿಂದ 40ರಷ್ಟು ವಾಹನ ಸಾಲ ತೀರಿಸಲಾಗದೇ ಬ್ಯಾಂಕ್ನವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶೇ.40ರಷ್ಟು ಮಂದಿ ಇದರ ಸಹವಾಸ ಬೇಡ ಅಂತ ಬೆನ್ನು ಹಾಕಿ ಹೋಗಿದ್ದಾರೆ. ಇರುವ ಶೇ.20ರಷ್ಟನ್ನು ಖಾಸಗಿಯವರಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವೇ ನಮ್ಮ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ವಾಹನ ಮಾಲೀಕರು ಮನವಿ ಮಾಡಿದ್ದಾರೆ.ಸಂಘಗಳ ಮನವಿರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿರುವ ತೆರಿಗೆಯನ್ನು ವಿನಾಯಿತಿ ನೀಡಬೇಕು. ಕೋವಿಡ್ ನಿಯಂತ್ರಣಕ್ಕೆ ಬರುವ 3 ರಿಂದ 6 ತಿಂಗಳ ಅವಧಿ ಹಿಡಿಯಬಹುದು. ಅಲ್ಲಿಯವರೆಗೆ ನಮ್ಮ ಚಾಲಕರ, ಮಾಲೀಕರ ಉದ್ಯೋಗ ಸೃಷ್ಠಿ ಆಗುವವರೆಗೆ ನಮ್ಮವರ ಖರ್ಚು ವೆಚ್ಚ ನೋಡಿಕೊಳ್ಳಬೇಕು. ನಮಗೆ ಸಹಕಾರ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ನಾವು ಎಲ್ಲವೂ ಸರಿಯಿದ್ದಾಗ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಾಕಷ್ಟು ಹಣ ಸಂದಾಯ ಮಾಡಿದ್ದೇವೆ. ಈಗ ಸರ್ಕಾರ ನಮ್ಮ ಸಹಕಾರಕ್ಕೆ ಬರಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಸಂಸ್ಥಾಪಕ ಹಾಗೂ ರಾಜ್ಯ ಖಾಸಗಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ನಾವು ಯಾವುದೇ ಬೆಲೆ ಏರಿಕೆ ಮಾಡದೇ ಹಳೆಯ ದರದಲ್ಲೇ ವಾಹನ ಓಡಿಸಿದ್ದೇವೆ. ಟೆಂಪೊ ಟ್ರಾವೆಲರ್ಗಳನ್ನು ತಾತ್ಕಾಲಿಕ ಆಂಬುಲೆನ್ಸ್ ಆಗಿ ಬಳಸಲು ನೀಡಿದ್ದೇವೆ. ಈ ಸಂದರ್ಭದಲ್ಲಿ ನಮ್ಮನ್ನು ಕಾಡುತ್ತಿರುವ ಸಮಸ್ಯೆಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿ ಸಹಕರಿಸಬೇಕು. ಪ್ರವಾಸಿ ಹಾಗೂ ಕೈಗಾರಿಕಾ ವಾಹನಗಳಿಗೆ ಪೂರ್ಣ ತೆರಿಗೆ ವಿನಾಯಿತಿ ನೀಡಬೇಕು. ವಾಹನ ವಿಮೆ ಭರಿಸಿದ್ದೇವೆ. ಕೇಂದ್ರ ಸರ್ಕಾರದ ಜತೆ ಸಮಾಲೋಚಿಸಿ ಇದನ್ನು ಮುಂದೂಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಪರಿಹಾರ, ಅನುದಾನ ಸಿಕ್ಕಿಲ್ಲ. ಅದನ್ನು ಒದಗಿಸಿ. ನಮ್ಮ ಸಾಲದ ಮೇಲಿನ ಬಡ್ಡಿಯನ್ನು ಆರು ತಿಂಗಳು ಪಡೆಯದೇ ಮುಂದೂಡಿ ಎಂದು ಮನವಿ ಮಾಡಿದ್ದಾರೆ.