ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಯ ಕಡೆ ದಿನವೂ ಸುಸೂತ್ರವಾಗಿ ನಡೆದಿದೆ. ಹೊಸಬರು, ಪುನರಾವರ್ತಿತ, ಖಾಸಗಿ ವಿದ್ಯಾರ್ಥಿಗಳು ಎಲ್ಲ ಸೇರಿ ಹಿಂದಿ ಪರೀಕ್ಷೆಗೆ 1,33,119 ವಿದ್ಯಾರ್ಥಿಗಳು ನೊಂದಾಯಿಸಿದ್ದು, 1,05,679 ವಿದ್ಯಾರ್ಥಿಗಳು ಹಾಜರಾಗಿದ್ದರೆ 4,503 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ರಾಜ್ಯಾದ್ಯಂತ ಒಟ್ಟು 1,076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಕಳೆದ ಏಪ್ರಿಲ್ 22ರಿಂದ ಪಿಯು ಪರೀಕ್ಷೆಯು ಶುರುವಾಗಿ ಇಂದಿಗೆ ಮುಕ್ತಾಯಗೊಂಡಿದೆ. ಪರೀಕ್ಷಾ ಅಕ್ರಮ, ಅವ್ಯವಹಾರದಲ್ಲಿ ಯಾರು ಭಾಗಿಯಾಗಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ. ಹಾಗೆ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ ಅಂತ ಪಿಯು ಬೋರ್ಡ್ ತಿಳಿಸಿದೆ.
ಈ ಬಾರಿ ಪರೀಕ್ಷೆಗೆ ಒಟ್ಟು 6,84,255 ವಿದ್ಯಾರ್ಥಿಗಳು ಎದುರಿಸಿದ್ದಾರೆ. ಇದರಲ್ಲಿ ಬಾಲಕರು-3,46,936, ಬಾಲಕಿಯರು-3,37,319 ಇದ್ದರೆ, ಒಟ್ಟಾರೆ ರೆಗ್ಯುಲರ್ ವಿದ್ಯಾರ್ಥಿಗಳು-6,00,519, ಪುನರಾವರ್ತಿತ ವಿದ್ಯಾರ್ಥಿಗಳು- 61,808, ಖಾಸಗಿ ವಿದ್ಯಾರ್ಥಿಗಳು 21,928 ಜನ ಪರೀಕ್ಷೆ ಬರೆದಿದ್ದಾರೆ. ಇನ್ನು ಎರಡ್ಮೂರು ದಿನದಲ್ಲಿ ಮೌಲ್ಯಮಾಪನ ಕಾರ್ಯ ಶುರುವಾಗಲಿದೆ.
ವಿಭಾಗವಾರು ಮಾಹಿತಿ
- ಕಲಾ ವಿಭಾಗ - 2,28,167
- ವಾಣಿಜ್ಯ ವಿಭಾಗ - 2,45,519
- ವಿಜ್ಞಾನ ವಿಭಾಗ - 2,10,569
ಕೀ ಉತ್ತರಗಳನ್ನು ಬಿಡುಗಡೆ: ನಿಗದಿಪಡಿಸಿದ್ದ ವೇಳಾಪಟ್ಟಿಯಂತೆ ಇಂದು ಮುಕ್ತಾಯವಾಗಿದೆ. ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ ಮಾದರಿ ಉತ್ತರಗಳನ್ನು ಸಿದ್ಧಪಡಿಸಿ, ಇಂದು ಇಲಾಖಾ ವೆಬ್‌ಸೈಟ್ pue.karnataka.gov.in ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮಾದರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ಮೇ 20 ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಲು ತಿಳಿಸಿದೆ.
ಇದನ್ನೂ ಓದಿ: ಮತ್ತೆ ಸಿಎಂ ಆದ್ರೆ ದಲಿತರ ಸಾಲ ಮನ್ನಾ: ಸಿದ್ದರಾಮಯ್ಯ