ಬೆಂಗಳೂರು: ಚೀನಾ ಮೂಲದ ಲೋನ್ ಆ್ಯಪ್ಗಳ ಹಾವಳಿಯಿಂದ ಈಗಾಗಲೇ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಕೊಡುವ ಈ ಚೈನೀಸ್ ಲೋನ್ ಆ್ಯಪ್ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ಪಣ ತೊಟ್ಟಿದ್ದು, ಒಂದು ವರ್ಷದಲ್ಲಿ ಅಂದಾಜು 100 ಕೋಟಿ ಹಣ ಫ್ರೀಜ್ ಮಾಡಿದ್ದಾರೆ.
2 ರಿಂದ 7 ಸಾವಿರದವರೆಗೆ ಸಾಲ ಕೊಟ್ಟು, ಅದನ್ನು ಮರುಪಾವತಿ ಮಾಡದ ಗ್ರಾಹಕರಿಗೆ ಅಶ್ಲೀಲ ಸಂದೇಶ ಹಾಗೂ ಬೈಗುಳ ಕಿರುಕುಳ ಕೊಡುತ್ತಿದ್ದ ಆನ್‌ಲೈನ್ ಲೋನ್ ಆ್ಯಪ್ಗಳ ಉಪಟಳಕ್ಕೆ ಈಗಾಗಲೇ ದೇಶದಾದ್ಯಂತ ಸಾಕಷ್ಟು ಮಂದಿ ಮೋಸ ಹೋಗಿದ್ದಾರೆ. ಇದಕ್ಕೆ ಸಿಲಿಕಾನ್ ಸಿಟಿ ಸಹ ಹೊರತಾಗಿಲ್ಲ. ಹೀಗಾಗಿಯೇ ಬೆಂಗಳೂರು ನಗರ ಪೊಲೀಸರು ಅಂದರೆ ಸಿಸಿಬಿ ಹಾಗೂ ನಗರದ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಲೋನ್ ಆ್ಯಪ್ಗಳ ಕೇಸ್ಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚೈನೀಸ್ ಲೋನ್ ಆ್ಯಪ್ಗಳ ಬೆನ್ನು ಬಿದ್ದಿರುವ ನಗರ ಪೊಲೀಸರು, ಕಳೆದ ಒಂದು ವರ್ಷದಲ್ಲಿ ಸುಮಾರು ನೂರು ಕೋಟಿ ಹಣ ಪ್ರೀಜ್ ಮಾಡಿದ್ದಾರೆ. ಚೈನೀಸ್ ಲೋನ್ ಆ್ಯಪ್ ಸೇರಿದಂತೆ ಸೈಬರ್ ಚೋರರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಸೆನ್ ಠಾಣೆಯ ಪೊಲೀಸರು ಸಾಕಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈಗಾಗಲೇ ಹಲವು ಮಂದಿ ಆರೋಪಿಗಳನ್ನ ಬಂಧಿಸಿ, ಕೋಟ್ಯಂತರ ರೂಪಾಯಿ ಫ್ರೀಜ್ ಮಾಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ನಗರದ 8 ಸೆನ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಂದ 40 ಕೋಟಿಗೂ ಅಧಿಕ ಹಾಗೂ ಸಿಸಿಬಿ ತನಿಖೆ ನಡೆಸುತ್ತಿರುವ 18 ಪ್ರಕರಣಗಳಲ್ಲಿ ಅಂದಾಜು 70 ಕೋಟಿ ಹಣವನ್ನು ಈ ಆ್ಯಪ್ಗಳಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ ಫ್ರೀಜ್ ಮಾಡಲಾಗಿದೆ. ಸಿಸಿಬಿ ಪೊಲೀಸರು ಭೇದಿಸಿರುವ 18 ಪ್ರಕರಣಗಳಲ್ಲಿ ಪ್ರೀಜ್ ಆದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶಾನಾಲಯಗೆ (ಇ.ಡಿ.) ಶಿಫಾರಸು ಮಾಡಲು ನಿರ್ಧರಿಸಿದ್ದಾರೆ ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.
ಭಾರತದಲ್ಲಿ ಲೋನ್ ಆ್ಯಪ್ಗಳ ಮೂಲಕ ಸಂಪಾದಿಸುವ ಕೋಟ್ಯಂತರ ಹಣವನ್ನು ಹಾಂಕಾಂಗ್ ಹಾಗೂ ಚೀನಾಗೆ ಟ್ರೇಡಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿಯೇ ಭಾರತದಿಂದ ಹೊರ ಹೋಗುತ್ತಿರುವ ಕೋಟ್ಯಂತರ ರೂಪಾಯಿ ಹಾಗೂ ಫ್ರೀಜ್ ಆಗಿರುವ ಹಣದ ಬಗ್ಗೆ ಮುಂದೆ ಇಡಿ ತನಿಖೆ ನಡೆಸಲಿದೆ ಎಂದರು.
ಇದನ್ನೂ ಓದಿ: ವೇಶ್ಯೆ ಎಂದು ವೈರಲ್ ಮಾಡುವುದಾಗಿ ಲೋನ್ ಆ್ಯಪ್ ಬೆದರಿಕೆ: ಯುವತಿ ಆತ್ಮಹತ್ಯೆ ಯತ್ನ