ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್ಪಿ) ಅಡಿಯಲ್ಲಿ ಪ್ರಸಕ್ತ ವರ್ಷ ಈವರೆಗಿನ ಪ್ರಗತಿ ನಿರಾಶಾದಾಯಕವಾಗಿದೆ. ಅರ್ಧ ವರ್ಷ ಕಳೆದರೂ ಅನೇಕ ಇಲಾಖೆಗಳು ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿವೆ.
ಪ್ರಸಕ್ತ ವರ್ಷ 23,023.37 ಕೋಟಿ ರೂ. ಮೊತ್ತವನ್ನು ಎಸ್ಸಿಎಸ್ಪಿಯಡಿ ಹಂಚಿಕೆ ಮಾಡಲಾಗಿದೆ. ಇತ್ತ ಟಿಎಸ್ಪಿಯಡಿ 9,361 ಕೋಟಿ ರೂ. ಅನುದಾನ ಹಂಚಲಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿ ಹಂಚಿಕೆಯಾದ ಅನುದಾನ ಇಲಾಖೆಗಳು ಸಮರ್ಪಕವಾಗಿ ಸದ್ಬಳಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿದ್ದರೂ, ಅನೇಕ ಇಲಾಖೆಗಳು ಬಳಸಲು ಮೀನಮೇಷ ಎಣಿಸುತ್ತಿವೆ.
ಶೇ.32.70ರಷ್ಟು ಎಸ್ಸಿಎಸ್ಪಿ ಅನುದಾನ ಬಳಕೆ: ಎಸ್ಸಿಎಸ್ಪಿಯಡಿ 2022-23ನೇ ಸಾಲಿನಲ್ಲಿ ಸರ್ಕಾರ 23,023.37 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಈ ಪೈಕಿ 8,496.30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಕ್ಟೋಬರ್ವರೆಗೆ 7,529.57 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಅಂದರೆ ಈವರೆಗೆ ಒಟ್ಟು ಅನುದಾನ ಹಂಚಿಕೆ ಮುಂದೆ ಕೇವಲ ಶೇ.32.70 ಮಾತ್ರ ಪ್ರಗತಿ ಸಾಧಿಸಲಾಗಿದೆ.
ಕಳಪೆ ಪ್ರಗತಿ ಕಂಡ ಇಲಾಖೆ ಯಾವುದು?: ಕೃಷಿ ಇಲಾಖೆಯು ಏಳು ತಿಂಗಳಲ್ಲಿ ಎಸ್ಸಿಎಸ್ಪಿಯಡಿ ಅನುದಾನ ಬಳಕೆಯಲ್ಲಿ ಕೇವಲ ಶೇ. 14.74ರಷ್ಟು ಪ್ರಗತಿ ಕಂಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ. 19.29 ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ಕೇವಲ ಶೇ.13.70 ಮಾತ್ರ ಪ್ರಗತಿ ಸಾಧಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನುದಾನ ಬಳಕೆಯಲ್ಲಿ ಕೇವಲ ಶೇ. 17.43ರಷ್ಟು ಪ್ರಗತಿ ಕಂಡಿದೆ. ಉನ್ನತ ಶಿಕ್ಷಣ ಇಲಾಖೆ ಕೇವಲ ಶೇ.2.02, ವಸತಿ ಇಲಾಖೆಯಲ್ಲಿ ಶೇ. 15.62, ಐಟಿ-ಬಿಟಿ ಶೇ.6.25 ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಶೇ.24.29ರಷ್ಟು ಪ್ರಗತಿ ಸಾಧಿಸಿದೆ.
ಯೋಜನೆ ಮತ್ತು ಕಾರ್ಯಕ್ರಮ ನಿಗಾ ಹಾಗೂ ಸಾಂಖ್ಯಿಕ ಇಲಾಖೆ ಕೇವಲ ಶೇ.16.29 ಮಾತ್ರ ಪ್ರಗತಿ ಕಂಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಈವರೆಗೆ ಶೇ. 21.30, ಯುವ ಸಬಲೀಕರಣ ಹಾಗೂ ಕ್ರೀಡೆ ಇಲಾಖೆ ಶೇ.12.93, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶೇ. 22.52 ಹಾಗೂ ಜಲಸಂಪನ್ಮೂಲ ಇಲಾಖೆ ಶೇ.24.39 ಪ್ರಗತಿ ಕಂಡಿದೆ.
ಟಿಎಸ್ಪಿಯಡಿ ಶೇ.28.50 ಮಾತ್ರ ಪ್ರಗತಿ: ಪ್ರಸಕ್ತ ವರ್ಷ ಟಿಎಸ್ಪಿಯಡಿ 9,361 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಈವರೆಗೆ 2,744.22 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದರೆ, 2,667.83 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಅಕ್ಟೋಬರ್ವರೆಗೆ ಒಟ್ಟು ಶೇ.28.50ರಷ್ಟು ಮಾತ್ರ ಪ್ರಗತಿ ಕಾಣಲು ಸಾಧ್ಯವಾಗಿದೆ.
ಕಳಪೆ ಪ್ರಗತಿ ಕಂಡ ಇಲಾಖೆ ಹೀಗಿದೆ?: ಜಲಸಂಪನ್ಮೂಲ ಇಲಾಖೆ ಟಿಎಸ್ಪಿಯಡಿ ಈವರೆಗೆ ಕೇವಲ ಶೇ.23.87, ಕೌಶಲ್ಯಾಭಿವೃದ್ಧಿ ಇಲಾಖೆ ಕೇವಲ ಶೇ.13.57, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಶೇ.20.56, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೇ.22.26, ಕೃಷಿ ಇಲಾಖೆ ಶೇ.10.07, ಐಟಿ-ಬಿಟಿ ಇಲಾಖೆ ಶೇ.11.04, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಶೇ.18 ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯು ಕೇವಲ ಶೇ.6.03ರಷ್ಟು ಪ್ರಗತಿ ಸಾಧಿಸಿದೆ.
ಗೃಹ ಇಲಾಖೆ ಈವರೆಗೆ ಕೇವಲ ಶೇ.7.45, ಉನ್ನತ ಶಿಕ್ಷಣ ಇಲಾಖೆ ಕೇವಲ ಶೇ.2.73, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಶೇ.18.18, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ.19.42, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶೇ.8.53 ಹಾಗೂ ಕಂದಾಯ ಇಲಾಖೆ ಕೇವಲ ಶೇ.0.81ರಷ್ಟು ಪ್ರಗತಿ ಸಾಧಿಲು ಸಾಧ್ಯವಾಗಿದೆ.
ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಜಗತ್ತಿನ ಎತ್ತರದ ಕಂಚಿನ ಪ್ರತಿಮೆ.. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣಪತ್ರ