ಬೆಂಗಳೂರು : ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನೆಹರು ಓಲೇಕಾರ್ ನೇಮಕ ಮಾಡಿರುವುದಕ್ಕೆ ಸಂಬಂಧಿಸಿದ ಮೂಲ ಕಡತ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಓಲೇಕಾರ್ ನೇಮಕ ಪ್ರಶ್ನಿಸಿ ಕೆ.ಸಿ ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಸರ್ಕಾರದ ಪರ ವಕೀಲರು, ನೆಹರು ಓಲೇಕಾರ್ ಅವರ ನೇಮಕಾತಿ ಕಾನೂನು ಪ್ರಕಾರವೇ ಇದೆ. 2007ರ ಫೆ.5ರಿಂದ 2012ರ ಡಿ.28ರವರೆಗೆ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರಾಗಿ ನಾಮ ನಿರ್ದೇಶನಗೊಂಡು ಸೇವೆ ಸಲ್ಲಿಸಿದ್ದಾರೆ.
ಹಿಂದಿನ ಸೇವೆ ಗಮನದಲ್ಲಿಕೊಟ್ಟು 2020ರ ನ.27ರಂದು ಮತ್ತೆ ಆಯೋಗದ ಅಧ್ಯಕ್ಷರ ಹುದ್ದೆಗೆ ಅವರನ್ನು ನೇಮಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಅವರು ಹಾಲಿ ಶಾಸಕರಾಗಿದ್ದು, ಎಸ್ಸಿ-ಎಸ್ಟಿ ಸಮುದಾಯದ ವಿಷಯಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದಾರೆ. ಹೀಗಾಗಿ, ಅರ್ಜಿದಾರರ ಆಕ್ಷೇಪಣೆಗೆ ಯಾವುದೇ ಆಧಾರ ಇಲ್ಲವಾಗಿದ್ದು, ವಜಾ ಮಾಡಬೇಕೆಂದು ಕೋರಿದರು.
ಓದಿ : ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ: ಸರ್ಕಾರದ ಕಟ್ಟುನಿಟ್ಟಿನ ಆದೇಶ
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ, ಹಿಂದಿನ ಅವಧಿಯಲ್ಲಿ ಆಯೋಗದ ಅಧ್ಯಕ್ಷರಾಗಿ ಓಲೇಕಾರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ. ಆಯೋಗದ ಸಭೆಗಳನ್ನೂ ನಡೆಸಿರಲಿಲ್ಲ. ಇದೇ ವಿಚಾರವಾಗಿ ಹೈಕೋರ್ಟ್ ಈ ಹಿಂದೆ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಮೇಲಾಗಿ ಆಯೋಗದ ಅಧ್ಯಕ್ಷರಾಗಲು ಅವರಿಗೆ ನಿಗದಿತ ಅರ್ಹತೆ ಇಲ್ಲ ಎಂದರು.
ಓಲೇಕಾರ್ ಪರ ವಕೀಲರು ಅರ್ಜಿದಾರರ ಆರೋಪಗಳಿಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ಪೀಠಕ್ಕೆ ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠ, ನೆಹರು ಓಲೇಕಾರ್ ನೇಮಕಾತಿಗೆ ಸಂಬಂಧಿಸಿದ ಮೂಲ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.