ಬೆಂಗಳೂರು: ಬೆಂಗಳೂರು ಸಾರಿಗೆ ಇಲಾಖೆಯಲ್ಲಿ ಕಳೆದ ಒಂದು ವರ್ಷದಲ್ಲಿ ಹಮ್ಮಿಕೊಂಡಿದ್ದ ನೂತನ ಸಾಧನೆಗಳ ಕುರಿತಾದ "ಸಾರಿಗೆ ಮಿತ್ರ" ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಿಡುಗಡೆ ಮಾಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಡಿ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಸಂಸ್ಥೆಗಳು ಒಳಪಟ್ಟಿದ್ದು, ಇವುಗಳಲ್ಲಿ ಕೈಗೊಂಡ ನೂತನ ಪ್ರಯತ್ನಗಳ ಬಗ್ಗೆ ಕಿರು ಪುಸ್ತಕ ಬೆಳಕು ಚೆಲ್ಲಲಿದೆ. ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ವಿನೂತನಗೊಳಿಸಲು ಪ್ರತಿಪಕ್ಷಗಳ ಕೆಲವು ನಾಯಕರ ಅಭಿಪ್ರಾಯಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಲಹೆ ಸೂಚನೆಗಳನ್ನು ಪುಸ್ತಕದಲ್ಲಿ ಸೇರಿಸಲಾಗಿದೆ.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಿಎಂಟಿಸಿ ಬಸ್ಸುಗಳಿಗೆ ಪ್ರತ್ಯೇಕ ಪಥವನ್ನು ಜಾರಿಗೊಳಿಸಲಾಗಿದೆ. ಬಿಎಂಟಿಸಿಯ ಆಯ್ದ 100 ಬಸ್ಸುಗಳಿಗೆ ಬೈಸಿಕಲ್ಗಳನ್ನು ಅಳವಡಿಸುವ ರ್ಯಾಕ್ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಕೆಲವು ಬಸ್ಸುಗಳಿಗೆ ಪ್ರಾಯೋಗಿಕವಾಗಿ ಇದನ್ನು ಅಳವಡಿಸಲಾಗಿದೆ.
ಹೊಸ ಯೋಜನೆಗಳು:
ಕೊರಿಯರ್ ಸೇವೆ ಪ್ರಾರಂಭಿಸುವ ಮೂಲಕ ವಾರ್ಷಿಕ ಅಂದಾಜು 100 ಕೋಟಿ ರೂ. ನಿವ್ವಳ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಷ್ಠಿತ ಇಸ್ರೋ ಸಂಸ್ಥೆಯಿಂದ ತಂತ್ರಜ್ಞಾನ ಮತ್ತು ಮಾರ್ಗದರ್ಶನ ಪಡೆದುಕೊಂಡು ಸಾರಿಗೆ ಸಂಸ್ಥೆಗಳ ಸೇವೆಯನ್ನು ಮತ್ತಷ್ಟು ಆಧುನಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರ್ಚೇಸ್ ವಿಭಾಗದಲ್ಲಿ ನಡೆಯುತ್ತಿದ್ದ ಸೋರಿಕೆ ತಡೆಯಲು ಇಸ್ರೋ ನೆರವಿನಿಂದ ನೂತನ ನಿಯಂತ್ರಣಾ ವ್ಯವಸ್ಥೆ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರಿಗೆ ನಿಗಮಗಳು ಹಾಗೂ ಸಾರಿಗೆ ಇಲಾಖೆಗಳ ಯೋಜನೆಗಳನ್ನು ಮಾನಿಟರ್ ಮಾಡಲು ಇಸ್ರೋ ಸಹಯೋಗ ಪಡೆಯಲಾಗಿದೆ. ಇಸ್ರೋ ಸಂಸ್ಥೆಯನ್ನು ಪ್ರಾಜೆಕ್ಟ್ ಮಾನಿಟರಿಂಗ್ ಕೇಂದ್ರವನ್ನಾಗಿ ನೇಮಿಸಲಾಗಿದೆ.
ಸಾರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆ ತರಲು ಹಿರಿಯ ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಸಲಹೆ ಸೂಚನೆ ಪಡೆದುಕೊಳ್ಳಲು ಕ್ರಮಕೈಗೊಂಡಿರುವ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.