ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಪಿಡುಗು ಕಂಡು ಬಂದ ನಂತರ ಉಂಟಾಗಿರುವ ಮಾಸ್ಕ್ಗಳ ಕೊರತೆ ನೀಗಿಸಲು ಸಂಜೀವಿನಿ ಸ್ವಸಹಾಯ ಗುಂಪುಗಳ ಮಹಿಳೆಯರು ಈವರೆಗೆ 13 ಲಕ್ಷ ಮಾಸ್ಕ್ ತಯಾರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವಿವಿಧ ಜಿಲ್ಲೆಗಳ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ಗಳನ್ನು ತಯಾರಿಸುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ ಜೊತೆ ವಿಡಿಯೋ ಸಂವಾದ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಂಜೀವಿನಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1,147 ಸ್ವಸಹಾಯ ಗುಂಪುಗಳ 3,168 ಮಹಿಳೆಯರು ಕಳೆದ 25 ದಿನಗಳಲ್ಲಿ 13 ಲಕ್ಷ ರೂ.ಗಳಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್ಗಳನ್ನು ತಯಾರಿಸಿ ಆಯಾ ಜಿಲ್ಲಾಡಳಿತ, ಸ್ಥಳೀಯ ಮೆಡಿಕಲ್ ಶಾಪ್ಗಳು, ಸಂಘ-ಸಂಸ್ಥೆಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡಿದ್ದಾರೆ. ಪ್ರತಿ ಮಾಸ್ಕ್ನ ಬೆಲೆ 10ರಿಂದ 22 ರೂಪಾಯಿ ಇದೆ ಎಂದರು.
ಬಿ.ಇ.ಎಲ್‌ನಿಂದ 30 ಸಾವಿರ ವೆಂಟಿಲೇಟರ್: ಕೊರೊನಾ ವಿರುದ್ಧದ ಹೋರಾಟದಲ್ಲಿ ವೆಂಟಿಲೇಟರ್‌ಗಳ ಕೊರತೆ ಆಗದಂತೆ ಎಚ್ಚರ ವಹಿಸಿರುವ ಕೇಂದ್ರ ಸರ್ಕಾರ, 30 ಸಾವಿರ ವೆಂಟಿಲೇಟರ್ ತಯಾರು ಮಾಡಲು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಆದೇಶ ನೀಡಿದೆ. ವೆಂಟಿಲೇಟರ್ ತಯಾರು ಮಾಡಲು ಅಂದಾಜು 200 ಬಿಡಿ ಭಾಗಗಳು ಬೇಕಾಗುತ್ತವೆ. ಈ ಪೈಕಿ ಏರ್ ಫ್ಲೋ ರೆಗ್ಯುಲೇಟ್ ಪ್ರಮುಖ ಭಾಗವಾಗಿದ್ದು, ಒಂದಕ್ಕೆ 20 ಸಾವಿರ ರೂ. ತಗುಲುತ್ತದೆ. ಈ ಮೊದಲ ಇಂತಹ ಬಿಡಿ ಭಾಗಗಳನ್ನು ಜರ್ಮಿನಿಯಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ತಯಾರಿಸಲು ಆರ್ಡರ್ ಬಂದಿದೆ ಎಂದು ಮಾಹಿತಿ ನೀಡಿದರು. ಸಣ್ಣ ಮಕ್ಕಳ ಚಿಕಿತ್ಸೆಗೆ ಬಳಸುವ 15 ಲೀಟರ್ ಸಾಮರ್ಥ್ಯದ ವಾಲ್ವ್ 14 ಸಾವಿರ ರೂ., ವಯಸ್ಕರ ಚಿಕಿತ್ಸೆಗೆ ಬಳಸುವ 250 ಲೀಟರ್ ವಾಲ್ವ್ ಬೆಲೆ 20 ಸಾವಿರ ರೂ. ಇದೆ ಎಂದು ಡಿಸಿಎಂ ಮಾಹಿತಿ ನೀಡಿದರು.