ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಜಾಲದ ನಂಟಿನ ಆರೋಪ ಪ್ರಕರಣದಲ್ಲಿ ನಟಿ ಸಂಜನಾಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸಂಜನಾಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅನಾರೋಗ್ಯ ಕಾರಣ ನೀಡಿ ನಟಿ ಸಂಜನಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. 3 ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ಒದಗಿಸಬೇಕು. ತಿಂಗಳಿಗೆ ಎರಡು ಬಾರಿ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂದು ಷರತ್ತು ವಿಧಿಸಿದೆ.
ನಟಿ ಪರ ಹಿರಿಯ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಸಂಜನಾಗೆ ಅನಾರೋಗ್ಯ ತೀವ್ರವಾಗಿದ್ದು, ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು. ಇದೇ ವೇಳೆ ಸಿಸಿಬಿ ಪರ ವಕೀಲರು, ಅಗತ್ಯವಿದ್ದರಷ್ಟೇ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರ ಹೇಳಿದ್ದಾರೆ. ಮಾಡಲೇ ಬೇಕೆಂದು ಹೇಳಿಲ್ಲ. ಹೀಗಾಗಿ ಜೈಲಿನಲ್ಲಿಯೇ ಔಷಧೋಪಚಾರ ಮಾಡಬಹುದು ಎಂದು ವಾದ ಮಂಡಿಸಿದ್ದರು.
ಅಂತಿವಾಗಿ ಹೈಕೋರ್ಟ್, ನಟಿ ಸಂಜನಾ ಅನಾರೋಗ್ಯ ಪರಿಗಣಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಸೆಪ್ಟೆಂಬರ್ 8 ರಿಂದ ಬಂಧನದಲ್ಲಿರುವ ನಟಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಪರಪ್ಪರ ಅಗ್ರಹಾರದಿಂದ ಬಿಡುಗಡೆ ಆಗಲಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪಾರ್ಟಿಗಳನ್ನು ಆಯೋಜಿಸಿ ಅಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಆರೋಪದಡಿ ನಟಿ ಸಂಜನಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅದರಂತೆ ಎನ್ ಡಿಪಿಎಸ್ ಕಾಯ್ದೆ ಸೆಕ್ಷನ್ 21, 21ಸಿ, 27ಎ, 27ಬಿ, 29 ಹಾಗೂ ಐಪಿಸಿ ಸೆಕ್ಷನ್ 120 ಬಿ ಅಡಿ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದ್ದು, ಪ್ರಸ್ತುತ ಜೈಲಿನಲ್ಲಿಯೇ ಇದ್ದಾರೆ.