ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲ ನಂಟು ಆರೋಪದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಸಿಸಿಬಿ ಅಧಿಕಾರಿಗಳ ಮುಂದೆ ತುಟಿಕ್ ಪಿಟಿಕ್ ಅನ್ನದಿದ್ರೂ ಅಧಿಕಾರಿಗಳು ಮಾತ್ರ, ರಾಗಿಣಿ ಬಾಯ್ಬಿಡದೇ ಇರುವ ಮಾಹಿತಿಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ತಾಂತ್ರಿಕ ಸಾಕ್ಷ್ಯಗಳ ಮೂಲಕ ಮಾದಕ ಲೋಕದಲ್ಲಿ ರಾಗಿಣಿ ಡ್ರಗ್ಸ್ ಪೆಡ್ಲರ್ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಸಾಮಾನ್ಯವಾಗಿ ನಟಿ ರಾಗಿಣಿ ದ್ವಿವೇದಿ ಎಂದೇ ಎಲ್ಲರಿಗೂ ಪರಿಚಿತ. ಆದರೆ, ಮಾದಕ ಲೋಕದಲ್ಲಿ ಆಕೆಗೆ ಹಲವು ಅಡ್ಡ ಹೆಸರುಗಳಿವೆ ಎಂಬ ವಿಚಾರ ಗೊತ್ತಾಗಿದೆ. ರಾಗಿಣಿ ಅಲಿಯಾಸ್ ಗಿಣಿ, ರಾಗಿಣಿ ಅಲಿಯಾಸ್ ರಾಗ್ಸ್, ದ್ವಿವೇದಿ ಅಲಿಯಾಸ್ ಡಿಂಪಿ ಅನ್ನುವ ಹೆಸರುಗಳಿವೆ. ಅಲ್ಲದೆ, ಪಂಚತಾರ ಹೋಟೆಲ್, ಪಬ್ಗಳಲ್ಲಿ ಡ್ರಗ್ಸ್ ದಂಧೆ ಮಾಡುತ್ತಿದ್ದರು ಎಂಬ ಬಗ್ಗೆಯೂ ಪೊಲೀಸರು ಸಾಕ್ಷ್ಯ ಕಲೆ ಹಾಕಿದ್ದಾರೆ ಎಂದು ಹೇಳಲಾಗ್ತಿದೆ.
ಈಕೆಗೆ ಪಾರ್ಟಿ ಆಯೋಜನೆ ಮಾಡುತ್ತಿದ್ದ ವಿರೇನ್ ಖನ್ನಾ ಈಗಾಗಲೇ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಈತನೇ ಪ್ರತಿಷ್ಠಿತ ಮಾಲ್, ಪಬ್, ಹೋಟೆಲ್ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಇದರ ವ್ಯವಹಾರವನ್ನು ರಾಗಿಣಿ ಆಪ್ತ ರವಿಶಂಕರ್ ನೋಡಿಕೊಳ್ಳುತ್ತಿದ್ದ. ಪಾರ್ಟಿಗೆ ವಿದೇಶದಿಂದ ಲೂಮ್ ಪೆಪ್ಪರ್ ಡ್ರಗ್ಸ್, ಟ್ಯಾಬ್ಲೆಟ್ ಪೂರೈಸುತ್ತಿದ್ದ. ಈ ಪಾರ್ಟಿಗಳಲ್ಲಿ ಗಣ್ಯರು, ರಾಜಕಾರಣಿಗಳ ಮಕ್ಕಳು, ಸಿನಿ ತಾರೆಯರು ಭಾಗಿಯಾಗಿ ಮಾದಕ ಲೋಕದಲ್ಲಿ ತೇಲ್ತಾ ಇದ್ರು.
ಸದ್ಯ ಸಿಸಿಬಿ ಪೊಲೀಸರು ನಟಿಯಿಂದ ವಿವಿಧ ಕಂಪನಿಗಳ ಮೊಬೈಲ್ಗಳು 2 ಪೆನ್ ಡ್ರೈವ್, ಮಾದಕ ವಸ್ತು ತುಂಬಿದ 6 ಸಿಗರೇಟ್ ಜಪ್ತಿ ಮಾಡಿ ಇದನ್ನ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ನಟಿಯ ಮೂರು ಮೊಬೈಲ್ಗಳನ್ನು ರಿಟ್ರೀವ್ ಮಾಡಿದ್ದಾರೆ. ಇದರಲ್ಲಿ ರಾಗಿಣಿ ವ್ಯವಹಾರ, ಮಾದಕ ಲೋಕದ ಲಿಂಕ್, ಡ್ರಗ್ಸ್ ಪೆಡ್ಲರ್ಗಳಾದ ರವಿಶಂಕರ್, ವಿರೇನ್ ಖನ್ನಾ, ಪ್ರತೀಕ್ ಶೆಟ್ಟಿ ಜೊತೆಗಿದ್ದ ಸಂಪರ್ಕದ ಸಾಕ್ಷ್ಯಗಳು ದೊರೆತಿವೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ. ಮತ್ತೊಂದೆಡೆ ರಾಗಿಣಿ ಸಿಸಿಬಿಯ ಬೋನಿನಿಂದ ಹೊರ ಬರಲು ಹರಸಾಹಸ ಪಡುತ್ತಿದ್ದಾರೆ.
ರಾಗಿಣಿ ಪೋಷಕರು ಮಗಳನ್ನ ಪ್ರತಿನಿತ್ಯ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ರಾಗಿಣಿಗಾಗಿ ಮುಂಬೈ ವಕೀಲರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.