ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದಾರೆ.
ಶ್ರೀನಿವಾಸ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ ಬಂಧಿತ ಆರೋಪಿ. ಈತ ಪ್ರಕರಣದಲ್ಲಿ 17 ನೇ ಆರೋಪಿಯಾಗಿದ್ದಾನೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರವಿಶಂಕರ್ ಸಿಸಿಬಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಶ್ರೀ ಹೆಸರು ಉಲ್ಲೇಖಿತವಾಗಿತ್ತು. ಪ್ರಕರಣದ 5 ನೇ ಆರೋಪಿ ವೈಭವ್ ಜೈನ್ ಮತ್ತು ಶ್ರೀ ಪರಿಚಿತರಾಗಿದ್ದರು. ಇಬ್ಬರು ಹಲವಾರು ಡ್ರಗ್ಸ್ ಪಾರ್ಟಿ ನಡೆಸಿದ್ದಾರೆ ಎನ್ನಲಾಗ್ತಿದೆ.
ಶ್ರೀನಿವಾಸ ಸುಬ್ರಹ್ಮಣ್ಯನ್ ನಗರದ ಹೊರ ವಲಯದಲ್ಲಿ ವೀಕೆಂಡ್ ಹೋಮ್ ಹೆಸರಿನಲ್ಲಿ ಕೆಲ ಮನೆ ಮತ್ತು ಫ್ಲಾಟ್ಗಳನ್ನು ಹೊಂದಿದ್ದಾನೆ. ಈತ ಬಹುತೇಕ ಫ್ಲಾಟ್ಗಳನ್ನು ಲೀಸ್ ಅಥವಾ ಬಾಡಿಗೆಗೆ ಪಡೆದಿದ್ದಾನೆ. ನಗರದ ಐಷರಾಮಿ ಹೋಟೆಲ್ನಲ್ಲಿ ಪಾರ್ಟಿ ಮಾಡಿದ ಬಳಿಕ ಆರೋಪಿಗಳಾದ ರಾಗಿಣಿ, ರವಿಶಂಕರ್, ಪ್ರಶಾಂತ್ ರಾಜು, ವೈಭವ್ ಜೈನ್ ಇತರರು ಸೇರಿಕೊಂಡು ವೀಕೆಂಡ್ ಹೋಮ್ನಲ್ಲಿ ತೆರಳಿ ಎಂಡಿಎಂಎ ಸೇವನೆ ಮಾಡಿದ್ದಾರೆಂಬ ಮಾಹಿತಿಯಿದೆ. ಸದ್ಯ ಈ ಶ್ರೀಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲ ತಿಂಗಳಲ್ಲಿ ಹಲವು ಬಾರಿ ಶ್ರೀ ಫ್ಲಾಟ್ಗೆ ರಾಗಿಣಿ ತೆರಳಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಫ್ಲಾಟ್ನಲ್ಲಿ ಮಾದಕ ವಸ್ತುವಿನ 13 ಮಾತ್ರೆಗಳು, 100 ಗ್ರಾಂ ಗಾಂಜಾ 1.1 ಗ್ರಾಂ ಎಂಡಿಎ ಹಾಗೂ 0.5 ಗ್ರಾಂ ಹ್ಯಾಷ್ ಆಯಿಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.