ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶಿರಾ ಕ್ಷೇತ್ರದ ಉಪಚುನಾವಣೆ ವಿಷಯ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಭೇಟಿ ಸಂದರ್ಭ ಸುದೀರ್ಘವಾದ ಸಮಾಲೋಚನೆ ನಡೆಸಿದ ನಾಯಕರು, ಶಿರಾ ಕ್ಷೇತ್ರದಲ್ಲಿ ಪಕ್ಷದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಜೆಡಿಎಸ್ಗೆ ಅನುಕಂಪದ ಅಲೆ ಇದೆ. ಇದನ್ನು ಮೀರಿ ನಿಲ್ಲಬಲ್ಲ ಸಾಮರ್ಥ್ಯವನ್ನು ಪಕ್ಷದ ಅಭ್ಯರ್ಥಿ ತೋರಬೇಕಿದೆ. ಮಾಜಿ ಸಚಿವ ಟಿಬಿ ಜಯಚಂದ್ರಗೆ ಮರಳಿ ಟಿಕೆಟ್ ನೀಡಿದರೆ ಗೆಲ್ಲುವ ಅವಕಾಶ ಎಷ್ಟಿದೆ. ಅವರನ್ನೇ ಕಣಕ್ಕಿಳಿಸದೆ ಗೆಲ್ಲುವ ಸಾಧ್ಯತೆ ಎಷ್ಟಿದೆ ಎಂಬ ಮಾತುಕತೆ ನಡೆಸಿದರು.
ಈಗಾಗಲೇ ತುಮಕೂರು ಜಿಲ್ಲೆಯ ಈ ಉಪಚುನಾವಣೆಗೆ ಕೆ.ಎನ್. ರಾಜಣ್ಣ, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಪೂರ್ಣ ಸಹಕಾರ ಸಿಕ್ಕರೆ ಮಾತ್ರ ಗೆಲ್ಲುವ ಅವಕಾಶ ಸಿಗಲಿದೆ. ಅನುಕಂಪದ ಅಲೆಯನ್ನು ಮೀರಿ ಜಯಚಂದ್ರ ಗೆಲ್ಲಬೇಕಾದರೆ ಪಕ್ಷದ ನಾಯಕರು ಪರಿಶ್ರಮ ತೊಡಗಿಸಬೇಕಿದೆ. ತುಮಕೂರು ಜಿಲ್ಲೆಯಲ್ಲಿ ಪಕ್ಷದ ನಾಯಕರ ಆಂತರಿಕ ಕಲಹದಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಸ್ತಿತ್ವ ಪಡೆದುಕೊಳ್ಳುತ್ತಿವೆ. ಇದನ್ನು ತಡೆಯುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಚೆನ್ನಾಗಿದೆ ಎನ್ನುವುದನ್ನು ಉಪಚುನಾವಣೆಯಲ್ಲಿ ಗೆದ್ದು ತೋರಿಸಬೇಕಿದೆ ಎಂಬ ವಿಚಾರಗಳನ್ನು ಚರ್ಚಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಇನ್ನು ಕೆಲ ದಿನ ಸಕ್ರಿಯ ಕಾರ್ಯಚಟುವಟಿಕೆಗೆ ಮರಳುವ ಸಾಧ್ಯತೆ ಕಡಿಮೆಯಿದೆ. ಉಪಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಸಂದರ್ಭ ಪಕ್ಷವು ಸಿದ್ದರಾಮಯ್ಯ ನೀಡುವ ಸೂಚನೆಯನ್ನು ಆಧರಿಸಿ ಮುನ್ನಡೆಯಬೇಕಿದೆ.
ಈ ಹಿನ್ನೆಲೆ ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಜೊತೆ ಡಿಕೆ ಶಿವಕುಮಾರ್ ಪರವಾಗಿ ಪಕ್ಷದ ವತಿಯಿಂದ ಸಲೀಂ ಅಹಮದ್ ಚರ್ಚೆ ನಡೆಸಿದ್ದಾರೆ. ಉಪಚುನಾವಣೆಗೆ ಮುಂದಿನ ದಿನಗಳಲ್ಲಿ ವಿವಿಧ ನಾಯಕರ ಜೊತೆ ಸಭೆ ನಡೆಸಬೇಕಿದ್ದು ಆ ಸಂದರ್ಭ ಪಕ್ಷದ ನಿಲುವು ಏನು ಎನ್ನುವುದನ್ನು ಗಟ್ಟಿಗೊಳಿಸಿಕೊಳ್ಳುವ ಸಂಬಂಧ ಇಂದಿನ ಸಭೆ ನಡೆದಿದೆ.