ಬೆಂಗಳೂರು: ಜೆಡಿಎಸ್ ಪಕ್ಷದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಾ.ರಾ. ಮಹೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡಿ ಸಮಾಜವಾದ ಸೋಗನ್ನು ಕಳಚಿಕೊಂಡ ಸಿದ್ದರಾಮಯ್ಯನವರು ಹುಸಿ ಸ್ವಾಭಿಮಾನದ ಕಾಗೆ ಬಂಗಾರ, ಸ್ವಾರ್ಥ ರಾಜಕಾರಣಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸನ್ಯಾಸಿ ಆದವರಂತೆ ಮಾತನಾಡುತ್ತಿರುವ ಸಿದ್ದರಾಮಯ್ಯನವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆಯೂ ಇಲ್ಲ ಎಂದಿದ್ದಾರೆ.
ತಾವು ಬೆಳೆದು ಬಂದ ಪಕ್ಷಕ್ಕೆ ದ್ರೋಹ ಬಗೆದ, ಹತ್ತಿದ ಏಣಿಯನ್ನು ಒದೆಯುವ ಜಾಯಮಾನದ ಸಿದ್ದರಾಮಯ್ಯ, ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದ್ದಾರೆ.
ಜೆಡಿಎಸ್ ಪಕ್ಷ ತೊರೆದಿದ್ದ ರಮೇಶ್ ಬಾಬು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಹಾಗಾಗಿ ಇಂದು ಜೆಡಿಎಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.