ಬೆಂಗಳೂರು: ಸಬ್ಸಿಡಿ ಯುಕ್ತ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಎರಡು ವಾರಗಳ ಹಿಂದಷ್ಟೇ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿಗೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ ಗ್ರಾಹಕರಿಗೆ ದರ ಏರಿಸಿ ಬರೆ ಎಳೆದಿದೆ. ಸಬ್ಸಿಡಿಯುಕ್ತ ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ 50 ರೂಗೆ ಏರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಹಣಕಾಸು ಬಿಕ್ಕಟ್ಟು, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಪೆಟ್ಟು, ಹಣದುಬ್ಬರ ಹೆಚ್ಚಳದಿಂದ ಈಗಾಗಲೇ ಜನಸಾಮಾನ್ಯರು ಹೈರಾಣಾಗಿದ್ದು, ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರ ಮತ್ತೆ ದರ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದಿದ್ದಾರೆ.
ಓದಿ: ಕೊರೊನಾದಿಂದ ಗುಣಮುಖರಾದ ಅಲೋಕ್ ಕುಮಾರ್: ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡ ಮಗಳು
ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿರುವ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ದುಸ್ಥರಗೊಳಿಸುತ್ತಿದೆ. ಎಲ್ಪಿಜಿ ದರ ಏರಿಕೆಯ ನಿರ್ಧಾರವನ್ನು ಕೇಂದ್ರ ಸರ್ಕಾರ ಈ ಕೂಡಲೇ ವಾಪಸ್ ಪಡೆಯಬೇಕು. ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನರು ನೆಮ್ಮದಿಯಿಂದ ಉಸಿರಾಡುವಂತೆ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.