ಬೆಂಗಳೂರು : ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದ್ದಂತೆ ರಾಜ್ಯದಲ್ಲಿ ಮೊದಲ ಹಂತವಾಗಿ 9ರಿಂದ 12ನೇ ತರಗತಿಯನ್ನ ಶುರು ಮಾಡಲಾಗಿತ್ತು.
ಸೋಂಕಿನ ಪ್ರಮಾಣ ನೋಡಿಕೊಂಡು ನಂತರ ಪ್ರಾಥಮಿಕ ತರಗತಿ ಆರಂಭದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು. ಇದೀಗ ಟಾಸ್ಕ್ ಪೋರ್ಸ್ ಸಭೆಯ ನಂತರ ಸೆಪ್ಟೆಂಬರ್ 6ನೇ ತಾರೀಖಿನಿಂದ 2ನೇ ಹಂತವಾಗಿ 6 ರಿಂದ 8ರವರೆಗೆ ಭೌತಿಕ ತರಗತಿ ಆರಂಭಿಸಲು ತೀರ್ಮಾನಿಸಲಾಗಿದೆ.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಿರುವ ಖಾಸಗಿ ಸಂಘಟನೆಗಳು 1 ರಿಂದ 5ನೇ ತರಗತಿ ಆರಂಭಕ್ಕೂ ಒತ್ತಾಯ ಮಾಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ರೂಪ್ಸಾ ಸಂಘದ ಅಧ್ಯಕ್ಷ ಹಾಲೂರು ಲೇಪಾಕ್ಷಿ, ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿತ್ತು.
ಈ ಹಿಂದೆ ಅವರನ್ನ ಭೇಟಿಯಾದಾಗ ಮಕ್ಕಳು ಖಿನ್ನತೆಗೆ ಹಾಗೂ ಶಿಕ್ಷಣದಿಂದ ವಂಚಿತರಾಗಿರುವುದು ಮನವರಿಕೆ ಇದ್ದರೂ ಕೂಡ ಈ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದರು.
ರಾಜ್ಯಾದ್ಯಂತ ಪೋಷಕರ ಒತ್ತಡವಿದ್ದು, ನಾವು ಅನುಮತಿ ಪತ್ರ ಕೊಡುತ್ತೇವೆ. ಶಾಲೆ ಆರಂಭ ಮಾಡಿ ಅಂತಿದ್ದಾರೆ. 1-5ನೇ ತರಗತಿ ಆರಂಭಕ್ಕೆ ಪೋಷಕರಿಂದ ಹೆಚ್ಚಿನ ಒತ್ತಡ ಬಂದರೆ, ಭೌತಿಕ ತರಗತಿ ಆರಂಭ ಮಾಡುವ ನಿಟ್ಟಿನಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಓದಿ: COVID: 2ನೇ ಅಲೆಯಲ್ಲಿ ಮೊದಲ ಬಾರಿಗೆ ಗಣನೀಯ ಇಳಿಕೆ ಕಂಡ ಸೋಂಕಿತರ ಸಂಖ್ಯೆ