ಬೆಂಗಳೂರು: ಆರು ತಿಂಗಳು ಓಲಾ ಸಂಸ್ಥೆ ಲೈಸೆನ್ಸ್ ರದ್ದು ಮಾಡಿದ್ದಆದೇಶವನ್ನು ಮೂರೇ ದಿನಕ್ಕೆ ಆದೇಶ ವಾಪಸ್ ಪಡೆದು ಆರ್ಟಿಓ ಓಲಾ ಕಂಪನಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೊನ್ನೆಯಷ್ಟೆ ಸಾರಿಗೆ ಇಲಾಖೆ ಆದೇಶವನ್ನು ಧಿಕ್ಕರಿಸಿ ವಾಹನ ಚಾಲನೆ ಮಾಡುತ್ತಿದ್ದ ಓಲಾ ಕಂಪನಿಯ ಲೈಸೆನ್ಸ್ ಅನ್ನು ಆರು ತಿಂಗಳು ರದ್ದು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಸಮ್ಮಿಶ್ರ ಸರ್ಕಾರದ ಒತ್ತಡಕ್ಕೆ ಮಣಿದು ಮತ್ತೆ ಇವತ್ತುತನ್ನ ಆದೇಶವನ್ನು ಹಿಂಪಡೆದಿದೆ. ಇದು ರಾಜಕೀಯ ಲಾಭಕ್ಕೆ ಮಾಡಲಾಗಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಓಲಾ ಕಂಪನಿಯು ಸಾರಿಗೆ ಇಲಾಖೆಯ ಆದೇಶಗಳಿಗೆ ಕ್ಯಾರೆ ಎನ್ನದೆ ಸಂಸ್ಥೆ ನಡೆಸುತ್ತಿದೆ. ಹೈ ಕೋರ್ಟ್ ಆದೇಶಕ್ಕೂ ಕ್ಯಾರೆ ಎಂದಿಲ್ಲ. ಚೈಲ್ಡ್ ಲಾಕ್ ರಿಮೂವ್ ಮಾಡದೆ ವಾಹನಗಳನ್ನು ರನ್ ಮಾಡುತ್ತಿದೆ. ಜೊತೆಗೆ ಓಲಾ ಬೈಕ್ಸ್ ಹೆಸರಲ್ಲಿ ವೈಟ್ ಬೋರ್ಡ್ ಬೈಕ್ಗಳನ್ನು ಬಳಸಿಕೊಂಡು ಯಾವುದೇ ರೀತಿಯ ಸೇಫ್ಟಿಯನ್ನು ತೆಗೆದುಕೊಳ್ಳದೆ ಸಾರ್ವಜನಿಕ ಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದ ಓಲಾ ಕಂಪನಿ ವಿರುದ್ಧ ಸಾರಿಗೆ ಇಲಾಖೆ ನೋಟಿಸ್ ನೀಡಿತ್ತು.
ಆದರೆ ಕಂಪನಿಯಿಂದ ಯಾವುದೇ ಉತ್ತರ ನೀಡದೆ ಕಾರುಗಳನ್ನ ರೋಡಿಗೆ ಇಳಿಸಿತ್ತು.ಇದರ ವಿರುದ್ಧ ಕೆಂಡಾಮಂಡಲವಾಗಿ ಸಾರಿಗೆ ಇಲಾಖೆ ಕಳೆದ ಶುಕ್ರವಾರ ಆರು ತಿಂಗಳುಗಳ ಕಾಲ ಲೈಸೆನ್ಸ್ ರದ್ದು ಮಾಡಿ ಆದೇಶ ನೀಡಿತ್ತು. ಆದರೆ ಇವತ್ತು ಮತ್ತೆ ಸಾರಿಗೆ ಇಲಾಖೆಯ ಆಯುಕ್ತರು ಯೂಟರ್ನ್ ಹೊಡೆದು ಕೇವಲ 15 ಲಕ್ಷ ದಂಡ ವಿಧಿಸಿ ತಮ್ಮ ಆದೇಶವನ್ನು ವಾಪಸ್ ಪಡೆದಿದ್ದಾರೆ.
ಇಂದು ಸಾರಿಗೆ ಇಲಾಖೆ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಚಾಲಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಓಲಾ ಕಂಪನಿಗೆ ಹದಿನೈದು ಲಕ್ಷ ದಂಡವನ್ನು ವಿಧಿಸಿದ್ದೇವೆ. ಕಂಪನಿ ಕೂಡ ಪಾವತಿಸಲಿದೆ ಅಂತ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಓಲಾ ಕಂಪನಿ ವಿರುದ್ಧ ತಿರುಗಿ ಬಿದ್ದ ಚಾಲಕರು ಕಂಪನಿಗೆ ಲೈಸೆನ್ಸ್ ನೀಡಬಾರದು ಎಂದು ಆಗ್ರಹಿಸಿದರು. ಆರ್ಟಿಓ ಆಯುಕ್ತ ಇಕ್ಕೇರಿ ಕಚೇರಿಗೆ ಆಗಮಿಸಿ ಮನವಿ ಮಾಡಿದ ಚಾಲಕರು, ಓಲಾ ಕಂಪನಿಯ ಒತ್ತಡಕ್ಕೆ ಮಣಿಯಬಾರದು ಎಂದರು.