ಬೆಂಗಳೂರು : ಬಿಬಿಎಂಪಿ ಹಾಗೂ ಜನಾಗ್ರಹ ತಂಡ 2021-21ನೇ ಆಯವ್ಯಯಕ್ಕಾಗಿ ಸಾರ್ವಜನಿಕರಿಂದ ಸುಮಾರು 3 ಸಾವಿರದಷ್ಟು ಸಲಹೆ ಸಂಗ್ರಹಿಸಿತ್ತು. ಈ ಸಂಬಂಧ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನಾಗರಿಕರ ಬೇಡಿಕೆ/ಸಲಹೆಗಳನ್ನು ಆಧರಿಸಿ ಅನುದಾನವನ್ನು ಮೀಸಲಿಡಲಾಗಿದೆ. ಅದರಂತೆ ನಗರದ ಪ್ರತಿ ವಾರ್ಡ್ಗೆ 60 ಲಕ್ಷ ರೂ. ಮೀಸಲಿಟ್ಟಿದ್ದು, 20 ಲಕ್ಷ ರೂ. ಪಾದಚಾರಿ ಮಾರ್ಗ ದುರಸ್ತಿ, 20 ಲಕ್ಷ ರೂ. ರಸ್ತೆ ಗುಂಡಿ ದುರಸ್ತಿ ಹಾಗೂ 20 ಲಕ್ಷ ರೂ. ಬೋರ್ವೆಲ್ಗಾಗಿ ಮೀಸಲಿಡಲಾಗಿದೆ ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಹಣವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ವಾರ್ಡ್ಗಳಲ್ಲಿ ನಡೆಯುವ ವಾರ್ಡ್ ಸಮಿತಿ ಸಭೆಗಳಲ್ಲಿ ಅನುದಾನ ಮೀಸಲಿಟ್ಟಿರುವ ವಿಷಯಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಯಾವೆಲ್ಲ ಕೆಲಸಗಳಾಗಬೇಕು ಎಂಬುದರ ಬಗ್ಗೆ ಅನುಮೋದನೆ ಪಡೆದು ಕೆಲಸ ಪ್ರಾರಂಭಿಸಿ, ಸಮಸ್ಯೆ ಇತ್ಯರ್ಥಪಡಿಸಕೊಳ್ಳಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎಲ್ಲಾ ವಿಶೇಷ ಆಯುಕ್ತರುಗಳು, ವಲಯ ಜಂಟಿ ಆಯುಕ್ತರುಗಳು, 198 ವಾರ್ಡ್ಗಳ ನೋಡಲ್ ಅಧಿಕಾರಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಜನಾಗ್ರಹ ತಂಡ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿರಿ: ಅಥಣಿ: ಹಾವು ಕಚ್ಚಿ ತಂದೆ-ಮಗ ದಾರುಣ ಸಾವು
ಎಲ್ಲ ವಾರ್ಡ್ಗಳಿಗೂ ನೋಡಲ್ ಅಧಿಕಾರಿ ನೇಮಕ
ನಗರದ 198 ವಾರ್ಡ್ಗಳಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಮುಕ್ತಾಯವಾದ ನಂತರ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್ಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದ್ದು, ವಾರ್ಡ್ ಸಮಿತಿ ಮೂಲಕ ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿಯ ವಾರ್ಡ್ ಸಮಿತಿಯನ್ನು ನೋಡಲ್ ಅಧಿಕಾರಿಯೊಂದಿಗೆ ಬಲಪಡಿಸುವ ನಿಟ್ಟಿನಲ್ಲಿ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ನಗರದಲ್ಲಿ ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ವಾರ್ಡ್ ಸಮಿತಿಗಳನ್ನು ಮಾಡಿದ್ದು, ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ವಾರ್ಡ್ ಸಮತಿ ಸಭೆಗಳು ನಡೆಯಲಿವೆ. ಈ ಸಭೆಯಲ್ಲಿ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್ ಅಧಿಕಾರಿಗಳು, ವಾರ್ಡ್ ಸಮಿತಿ ನೋಡಲ್ ಅಧಿಕಾರಿ-ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡು ಸಭೆಯಲ್ಲಿ ಚರ್ಚೆಯಾದ ದೂರುಗಳು-ಸಮಸ್ಯೆಗಳನ್ನು ಪಟ್ಟಿ ಮಾಡಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಮಸ್ಯೆ ಇತ್ಯರ್ಥಕ್ಕೆ ನಾಗರಿಕರ ಸಹಭಾಗಿತ್ವ ಅಗತ್ಯ
ನಗರದಲ್ಲಿರುವ ಸಮಸ್ಯೆಗಳು ಇತ್ಯರ್ಥವಾಗಬೇಕಾದರೆ ನಾಗರಿಕರ ಸಹಭಾಗಿತ್ವ ಅತ್ಯಗತ್ಯ. ಅದಕ್ಕಾಗಿ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ‘ನಗರದ ಶುಚಿತ್ವಕ್ಕಾಗಿ ನಾಗರಿಕರ ಸಹಭಾಗಿತ್ವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ವಲಯ/ವಿಭಾಗೀಯ/ವಾರ್ಡ್ ಮಟ್ಟದಲ್ಲಿ ಸಂಯೋಜಕರು/ಕೋ-ಆರ್ಡಿನೇಟರ್‌ಗಳು, ಬ್ಲಾಕ್ ಮಟ್ಟದಲ್ಲಿ ಶುಚಿಮಿತ್ರ ಹಾಗೂ ಲೇನ್ ಮಟ್ಟದಲ್ಲಿ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಘನತ್ಯಾಜ್ಯ ವಿಲೇವಾರಿ ಪದ್ಧತಿಯನ್ನು ಸರಿಪಡಿಸಬಹುದಾಗಿದೆ ಎಂದರು.
ನಗರದಲ್ಲಿ ಬಹುತೇಕ ಕಡೆ ಮಳೆ ನೀರು ಹರಿಯುವ ರಾಜಕಾಲುವೆಗಳಿಗೆ ಕೊಳಚೆ ನೀರನ್ನು ಬಿಡಲಾಗುತ್ತಿದೆ. ಇದರಿಂದ ಪರಿಸರ ಹಾಳಾಗಲಿದೆ. ಆದ್ದರಿಂದ ನಾವೆಲ್ಲರೂ ಸೇರಿ ರಾಜಕಾಲುವೆಗಳಿಗೆ ಕೊಳಚೆ ನೀರು ಬಿಡಬಾರದೆಂದು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಹಾಗೂ ರಾಜಕಾಲುವೆಗಳಲ್ಲಿ ಮಳೆ ನೀರು ಮಾತ್ರ ಹರಿಯುವಂತೆ ಮಾಡಬೇಕು. ಜೊತೆಗೆ ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.
ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲೂ ಕೂಡ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಗರದಲ್ಲಿ ಸದ್ಯ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದು, ಅದನ್ನು ಇನ್ನೂ ಕಡಿಮೆ ಮಾಡಬೇಕು. ಅದಕ್ಕೆ ನಾಗರಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ನಗರದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಬೇಕು ಎಂದು ತಿಳಿಸಿದರು.