ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 58,113 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜುನಾಥ್ ಘೋಷಿಸಿದ್ದಾರೆ.
ಮತ ಎಣಿಕೆ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ 688 ಮತಗಟ್ಟೆಗಳಲ್ಲಿ ಮತಗಳ ಚಲಾವಣೆಯಾಗಿತ್ತು. 25 ಸುತ್ತುಗಳಲ್ಲಿ ಮತಎಣಿಕೆ ಮಾಡಲಾಗಿದ್ದು, ಇವಿಎಂಗಳಲ್ಲಿ 2,09,129 ವೋಟ್, ಇಟಿಪಿಬಿಎಸ್ ಮೂಲಕ 4, ಅಂಚೆ ಮತ 412 ಮತಗಳ ಚಲಾವಣೆಯಾಗಿತ್ತು.
ಅಂಚೆ ಮತದಲ್ಲಿ 57 ಮತ ತಿರಸ್ಕೃತಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 253, ಕಾಂಗ್ರೆಸ್ ಅಭ್ಯರ್ಥಿ ಕುಸುಮ ಪರ 78 ,ಜೆ,ಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ 18 ಮತ ಚಲಾವಣೆ ಆಗಿವೆ. ಸೈನಿಕರು ಚಲಾಯಿಸುವ ಇಟಿಪಿಬಿಎಸ್ ಮತಗಳಲ್ಲಿ 1 ಕುಸುಮ ಪರ ಹಾಗೂ 3 ಮುನಿರತ್ನ ಪರ ಚಲಾವಣೆ ಆಗಿವೆ. ಅಂಚೆ ಮತ, ಇವಿಎಂ, ಇಟಿಪಿಬಿಎಸ್ ಎಲ್ಲ ಸೇರಿ ಒಟ್ಟು 2,09,488 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 1,25,990 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 67,877 ಮತ ಪಡೆದಿದ್ದಾರೆ. 58,113 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕುಸುಮಾ ವಿರುದ್ಧ ಜಯಗಳಿಸಿದ್ದಾರೆ ಎಂದು ಘೋಷಣೆ ಮಾಡಿದರು.
ನಂತರ ಆರ್.ಆರ್.ನಗರ ಕ್ಷೇತ್ರ ಚುನಾವಣೆಯ ಗೆಲುವಿನ ಪ್ರಮಾಣಪತ್ರವನ್ನು ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ನೀಡಲಾಯಿತು.