ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳು ದಯನೀಯ ಪರಿಸ್ಥಿತಿಗೆ ತಲುಪಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ನಮ್ಮ ಮುಖಂಡರನ್ನು ಎರಡು ರಾಷ್ಟ್ರೀಯ ಪಕ್ಷಗಳು ಆಮಿಷವೊಡ್ಡಿ ಸೆಳೆಯುತ್ತಿವೆ. ನಮ್ಮ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ಕಣಕ್ಕೆ ಇಳಿಸುತ್ತಿದ್ದಾರೆ. ಜೆಡಿಎಸ್ಗೆ ಇದು ಹೊಸದೇನೂ ಅಲ್ಲ. ನಮ್ಮಲ್ಲೇ ಇದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪತಿ ರವಿಕುಮಾರ್ ಕಾಂಗ್ರೆಸ್ಗೆ ಹೋಗಿದ್ದಾರೆ. ನಮ್ಮಲ್ಲಿ ನಾಲ್ಕು ವರ್ಷ ಅಧಿಕಾರ ಅನುಭವಿಸಿ ತಿಂದು, ಉಂಡು, ತೇಗಿ ಈಗ ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಇದು ಕಾರ್ಯಕರ್ತರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
ನಾಳೆಯಿಂದ ಪ್ರಚಾರ : ನಾಳೆಯಿಂದ ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಯ ಪ್ರಚಾರ ಆರಂಭವಾಗಲಿದ್ದು, ಯಾವ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಸಲಹೆ ಸೂಚನೆಗಳನ್ನು ಕಾರ್ಯಕರ್ತರಿಗೆ ನೀಡಿದ್ದೇನೆ. ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ನಾಳೆ ಅಂತಿಮ: ಆರ್ಆರ್ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ನಾಳೆ ಮತ್ತೊಂದು ಸಭೆ ಕರೆಯಲಾಗಿದೆ. ನಾಳೆ ಪಕ್ಷದ ಕಚೇರಿಯಲ್ಲಿ 11.30 ಕ್ಕೆ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಖಂಡರ ಜೊತೆ ಚರ್ಚೆ ನಡೆಸಿದ ಬಳಿಕ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಈಗಾಗಲೇ ಮೂವರ ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಒಬ್ಬರನ್ನು ಅಂತಿಮಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.