ಬೆಂಗಳೂರು: ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ರೌಡಿಯೊಬ್ಬ ಡ್ರ್ಯಾಗರ್ ನಿಂದ ಇರಿದಿರುವ ಘಟನೆ ಹೆಚ್ಎಎಲ್ ಠಾಣಾ ವ್ಯಾಪ್ತಿಯ ಜ್ಯೋತಿನಗರಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆ ತರಲು ಹೋಗಿದ್ದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿನುತಾ ಅವರಿಗೆ ಆರೋಪಿ ಶೇಕ್ ಶರೀಫ್ ಎಂಬಾತ ಡ್ರ್ಯಾಗರ್ ನಿಂದ ಇರಿದಿದ್ದಾರೆ. ಆಗಸ್ಟ್ 6 ರಂದು ಈ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಶೇಕ್ ಶರೀಫ್ ವಿರುದ್ಧ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ, ಮತ್ತೊಂದು ಕೊಲೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲು ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿನುತಾ ಮತ್ತು ತಂಡ ಮುಂದಾಗಿತ್ತು.
ಆರೋಪಿ ರಾತ್ರಿ 9.30ಕ್ಕೆ ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಂಧಿಸಲು ಮುಂದಾದ ಮಹಿಳಾ ಪೊಲೀಸ್ ವಿನುತಾಗೆ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ. ಗಾಯಾಳು ವಿನುತಾಗೆ ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಖಾಸಗಿ ಬಸ್ ಅಪಘಾತ ..ಇಬ್ಬರು ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ