ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು 11 ಮಂದಿ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಸಿದ್ದಾಪುರ ಸುನೀಲ್, ಕಣ್ಣನ್, ವೇಲ, ಪ್ರದೀಪ್, ಮನು, ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ, ಕಾರ್ತಿಕ್, ವಾಲೆ ಪ್ರವೀಣ ಸೇರಿದಂತೆ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆ. 4ರಂದು ಪರಪ್ಪನ ಅಗ್ರಹಾರ ಜೈಲಿನ ಸಮೀಪ ರೌಡಿ ಶೀಟರ್ ಮಹೇಶ್ ಕೊಲೆ ನಡೆದಿತ್ತು. ಕೊಲೆ ನಡೆದ 48 ಗಂಟೆಯೊಳಗ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಭೂಗತ ಜಗತ್ತನ್ನ ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣ ಪೊಲೀಸರಿಗೆ ಸಾಕಷ್ಟು ಸವಾಲು ಕೂಡ ಎದುರಾಗಿತ್ತು. ಹತ್ಯೆ ಮಾಡಿ ಹೊಸೂರಿನ ಬಳಿ ಅಡಗಿ ಕುಳಿತಿದ್ದ ಆರೋಪಿಗಳು ಇಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ಪತ್ತೆಗಾಗಿ ಡಿಸಿಪಿ ಸಿ.ಕೆ ಬಾಬಾ ವಿಶೇಷ ತಂಡಗಳನ್ನ ರಚನೆ ಮಾಡಿದ್ದರು. ಇಂದು ಪರಪ್ಪನ ಅಗ್ರಹಾರ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇವರು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಶಿಷ್ಯಂದಿರಾಗಿದ್ದಾರೆ. ಈ ಹಿಂದೆ ಹಾಸನದಲ್ಲಿ ನಡೆದಿದ್ದ ಮಹೇಶ ಗುರು ಶಾಂತಿನಗರ ಲಿಂಗನ ಕೊಲೆ ಕೇಸ್ನಲ್ಲಿದ್ದ ಬಹುತೇಕ ಆರೋಪಿಗಳು ಈ ಕೇಸ್ನಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ
ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ಹತ್ಯೆಯಾಗಿದ್ದ ರೌಡಿಶೀಟರ್: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರ ಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್ ಸಿದ್ದಾಪುರ ಮಹೇಶ್ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಮಹೇಶ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಶುಕ್ರವಾರ (ಆ.4) ಬಿಡುಗಡೆಯಾಗಿ ಹೊಸ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮಹೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್‌ನಲ್ಲಿ ಮಹೇಶ್ ಲೀಡರ್ ಆಗಿದ್ದ.
ಹಳೇ ವೈಷಮ್ಯಕ್ಕೆ ಹತ್ಯೆ: 2019ರ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಹಾಸನದ ಫಾರ್ಮ್ ಹೌಸ್ನಲ್ಲಿ ರೌಡಿಶೀಟರ್ ಲಿಂಗನನ್ನ ವಿಲ್ಸನ್ ಗಾರ್ಡನ್ ನಾಗನ ಬಣ ಹತ್ಯೆ ಮಾಡಿತ್ತು. ಮೋಹನ್, ನಂಜಪ್ಪ, ಕಣ್ಣನ್, ಕುಮಾರ್, ಪ್ರದೀಪ ಗ್ರೇಸ್ ವಾಲ್ಟರ್, ಸುನೀಲ್ ಸೇರಿದಂತೆ 16 ಜನರ ತಂಡ ಲಿಂಗನನ್ನ ಕೊಲೆ ಮಾಡಿತ್ತು. ಹತ್ಯೆಗೆ ಪ್ರತೀಕಾರವಾಗಿ ಆತನ ಬಣದಲ್ಲಿದ್ದ ಸಿದ್ದಾಪುರ ಮಹೇಶ, ವಿಲ್ಸನ್ ಗಾರ್ಡನ್ ನಾಗನ ಅತ್ಯಾಪ್ತನಾಗಿದ್ದ ಮದನ್ ನನ್ನ ಮರ್ಡರ್ ಮಾಡಿದ್ದ. ಇದು ನಾಗನ ಸಿಟ್ಟಿಗೆ ಕಾರಣವಾಗಿತ್ತು. ಅದೇ ಕಾರಣಕ್ಕೆ ತಡರಾತ್ರಿ ಮಹೇಶ ಜೈಲಿನಿಂದ ಹೊರ ಬರುತ್ತಿದ್ದಂತೆ ನಾಗನ ತಂಡದ ಸದಸ್ಯರು ಆತನನ್ನ ಹತ್ಯೆ ಮಾಡಿದ್ದಾರೆ. ಬಳಿಕ ಮಾರಕಾಸ್ತ್ರಗಳನ್ನ ಎಲೆಕ್ಟ್ರಾನಿಕ್ ರಸ್ತೆಯ ಕೋನಪ್ಪನ ಅಗ್ರಹಾರದ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ರೌಡಿಶೀಟರ್ ಹತ್ಯೆ