ಬೆಂಗಳೂರು: ವ್ಯಕ್ತಿಯೊಬ್ಬ ತಮ್ಮನ್ನು ಗುರಾಯಿಸಿದ ಎಂಬ ಕಾರಣಕ್ಕೆ ಆತನನ್ನು ಅಟ್ಟಾಡಿಸಿ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಹಿನ್ನೆಲೆ:
ಜೋಗಯ್ಯ, ಪುನೀತ್, ವಿಕ್ಕಿ ಎಂಬ ಮೂವರು ಹಾಗೂ ಇವರೊಂದಿಗೆ ಇನ್ನೂ ಕೆಲವರು ಸೇರಿಕೊಂಡು ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವನಗರದ ಬಾರೊಂದರಲ್ಲಿ ಸೇವಿಸುತ್ತಿದ್ದರು. ಈ ವೇಳೆ, ಆಟೋ ಚಾಲಕ ಸತೀಶ್ ಎಂಬವರು ಕೂಡ ಬಾರ್ಗೆ ಬಂದಿದ್ದಾರೆ. ಈ ಸಂದರ್ಭ ಸತೀಶ್ ತಮ್ಮನ್ನು ಗುರಾಯಿಸಿದ ಎಂದು ಆರೋಪಿಗಳು ಆತನನ್ನು ಅಟ್ಟಾಡಿಸಿಕೊಂಡು ಮಚ್ಚುಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ತಕ್ಷಣ ಸ್ಥಳೀಯರು ಹಲ್ಲೆಗೊಳಗಾದ ಸತೀಶ್‌ನನ್ನು ಗಿರಿನಗರದ ಪಲ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಸತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಗಾಯಾಳು ಸತೀಶ್ ಹೇಳಿಕೆ ಹಾಗೂ ಸಿಸಿಟಿವಿ ದೃಶ್ಯ ಆಧರಿಸಿ ನಾಲ್ವರನ್ನು ಬಂಧಿಸಿದ್ದು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.