ಬೆಂಗಳೂರು: ರಾಜಧಾನಿಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ಸಿದ್ದಾಪುರ ಪೊಲೀಸ್ ಠಾಣೆಯ ರೌಡಿಶೀಟರ್ನನ್ನು ನಗರ ದಕ್ಷಿಣ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ವೆಂಕಟೇಶ್ ಆಲಿಯಾಸ್ ಒಂಟಿ ಕೈ ವೆಂಕಟೇಶ್ ಬಂಧಿತ ರೌಡಿಶೀಟರ್. ಕೊಲೆ, ಕೊಲೆಯತ್ನ, ಸುಲಿಗೆ ಹಾಗೂ ಜೀವಬೆದರಿಕೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬಂಧಿತನ ವಿರುದ್ಧ ಸಿದ್ದಾಪುರ ಹಾಗೂ ಕೋರಮಂಗಲ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದವು.
ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ - ವಿಡಿಯೋ
ಹಲವು ಬಾರಿ ಜೈಲಿಗೆ ಹೋಗಿಬಂದರೂ ಮತ್ತೆ ಏರಿಯಾದಲ್ಲಿ ಗೂಂಡಾ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. ನಿರಂತರವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ವಿಚಾರಣೆಗೆ ಹಾಜರಾಗುವಂತೆ ವಾರೆಂಟ್ ಹೊರಡಿಸಿದರೂ ಆರೋಪಿ ಹಾಜರಾಗುತ್ತಿರಲಿಲ್ಲ. ತಮ್ಮ ವಿರುದ್ಧ ಸಾಕ್ಷಿ ಹೇಳುವವರಿಗೂ ಜೀವ ಬೆದರಿಕೆ ಹಾಕುತ್ತಿದ್ದ. ಈ ಮೂಲಕ ಸಮಾಜಕ್ಕೆ ಕಂಟಕನಾಗಿದ್ದ ವೆಂಕಟೇಶ್ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ. ಈ ಕಾಯ್ದೆಯಡಿ ಬಂಧಿತನಾದರೆ ಒಂದು ವರ್ಷದವರೆಗೂ ಜಾಮೀನು ಸಿಗುವುದಿಲ್ಲ.