ಬೆಂಗಳೂರು: ಶಿವಾಜಿನಗರ ಕ್ಷೇತ್ರದ ತಮ್ಮ ಕಾರ್ಯಕರ್ತರ ಜೊತೆಗೆ ಮಾಜಿ ಶಾಸಕ ರೋಷನ್ ಬೇಗ್ ಗುಪ್ತ ಸಭೆ ನಡೆಸುತ್ತಿದ್ದಾರೆ.
ಶಿವಾಜಿನಗರದ ಶಮ್ಷ್ ಕನ್ವೆನ್ಷನ್ ಹಾಲ್ನಲ್ಲಿ ಸಾವಿರಾರು ಬೆಂಬಲಿಗರ ಜೊತೆ ಸಭೆ ಏರ್ಪಡಿಸಲಾಗಿದೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಮುಂದಿನ ನಡೆ ಬಗ್ಗೆ ಕಾರ್ಯಕರ್ತರ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಪಕ್ಷೇತರವಾಗಿ ನಿಲ್ಲಬೇಕಾ ಅಥವಾ ಏನ್ ಮಾಡಬೇಕು ಎಂದು ಕಾರ್ಯಕರ್ತರು, ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆಗೆ ಸೋಮವಾರ ಕಡೆ ದಿನವಾದ್ದರಿಂದ ಇಂದಿನ ರೋಷನ್ ಬೇಗ್ ಅವರ ಈ ಸಭೆ ಮಹತ್ವ ಪಡೆದುಕೊಂಡಿದೆ. ಉಪಚುನಾವಣೆಗೆ ಸ್ಪರ್ಧಿಸುತ್ತಾರಾ? ಇಲ್ಲ ಚುನಾವಣೆಯಲ್ಲಿ ತಟಸ್ಥವಾಗಿ ಇರುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಅಲ್ಲದೆ ಇಂದಿನ ಈ ಸಭೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಇಂದು ಅಭಿಮಾನಿಗಳ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ನಾಳೆ ಚುನಾವಣೆಗೆ ಸ್ಪರ್ಧಿಸುವುದು ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದಲ್ಲದೆ ಆಪ್ತ ಮೂಲಗಳ ಪ್ರಕಾರ ಸಭೆಯಲ್ಲಿ ಪಕ್ಷೇತರರಾಗಿ ಉಪ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದು, ಬಿಜೆಪಿ ಸರ್ಕಾರ ಬರಲು ಕಾರಣವಾದ ನಿಮಗೆ ಅನ್ಯಾಯ ಆಗಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಸ್ಪರ್ಧೆ ಮಾಡಿ ಎಂದು ಬೆಂಬಲಿಗರು ಒತ್ತಾಯ ಮಾಡಿರುವುದು ತಿಳಿದು ಬಂದಿದೆ.